30 September, 2021

ಮನ್ವಂತರ...

ಬದುಕಿನ ಬಂಡಿಯ ಯಾಣವಿದು
ಬಲು ಪ್ರಯಾಸದ ಪ್ರಯಾಣವೂ,
ಹತ್ತಾರು ನಿಲ್ದಾಣಗಳಿವೆ ಇಲ್ಲಿ
ನಡುವೆ ನೂರಾರು ತಿರುವುಗಳು...

ಭಾವಗಳ ಸಾಗರದೊಳಗೆ
ನೋವು ನಲಿವುಗಳ ತೆರೆಗಳಿವೆ,
ಕಣ್ಣಳತೆಗೂ ಸಿಗದಷ್ಟು ದೂರದಲಿ
ಬದುಕಿನ ಈ ದಡಗಳಿವೆ... 

ಮನಸೆಂಬ ಆಗಸದಲ್ಲಿ
ಭಾವಗಳ ಬಣ್ಣದ ಚಿತ್ತಾರ,
ಕನಸುಗಳೆಂಬ ಮೋಡದ ಮರೆಯಲಿ
ಬದುಕಲಿ ಒಲವಿನ ಚಮತ್ಕಾರ...

ಒಲವಿನ ಈ ಹಾಡಿನಲಿ
ಕನಸಿನ ಸಾಲುಗಳೇ ಸಾಹಿತ್ಯ,
ಬದುಕಿನಾ ಈ ಸಂತೆಯಲಿ
ಭಾವನೆಗಳದೇ ವ್ಯವಹಾರ...

18 September, 2021

ಮಂಥನ...

ಕುದಿಯಬೇಡ ಮನವೇ
ಆವಿಯಾಗುತಾವ ಕನಸು,
ಉರಿಯಬೇಡ ಮನವೇ
ಬೂದಿಯಾಗುವಂತೆ ಬದುಕು...

ಸುಟ್ಟು ಹಾಕಬೇಕು ಇಲ್ಲಿ
ಬರೀಯ ಕೆಟ್ಟದ್ದನ್ನು ಮಾತ್ರ,
ಕೋಪ ಮಿತ್ರನಲ್ಲ ಇಲ್ಲಿ
ಸ್ನೇಹಕ್ಕಾಗಿ ಹಾತೊರೆದುಬಿಡಲು...

ಬದುಕು ನಡೆಯುದು ಇಲ್ಲಿ
ಪ್ರೀತಿಯ ಜೊತೆಯಲಷ್ಟೇ,
ತಾಳ್ಮೆ ಶತ್ರುವಲ್ಲ ನಿನಗೆ
ಜೀವ ತುಂಬುವ ಅಮೃತದಂತೆ...

ಉರಿಯುವುದಾದರೆ ಉರಿದುಬಿಡು ಒಮ್ಮೆ
ಜಠರಾಗ್ನಿ ಶಾಂತವಾಗಿಬಿಡಲಿ,
ಕುದಿಯುವುದಾದರೆ ಕುದಿಸಿಬಿಡು ಒಮ್ಮೆ
ಮನದ ಕಲ್ಮಷಗಳೆಲ್ಲಾ ಆವಿಯಾಗಿಬಿಡಲಿ...