31 October, 2026

ಬದುಕೆಂಬ ಚಂದಿರ...

ಭವದ ಬಂಧವ ಕಳೆಯೇ 
ಭಕ್ತಿಯ ಭರವಸೆ ಇರಲಿ,
ಮನಸನು ಮಂದಿರವಾಗಿಸೇ 
ಕರ್ಮದ ಬಲವಿರಲಿ...

ಜಗವು ಶೂನ್ಯವು ಇಲ್ಲಿ 
ಶೂನ್ಯದಿಂದಲೇ ಆರಂಭ ಬದುಕು,
ನಿರಾಕಾರ ಆತ್ಮದ ಒಳಗೂ 
ವಿಕಾರವ ತುಂಬಿದೆ ಜಗವು...

ಬ್ರಹ್ಮಾಂಡದ ಬೆಳಕೆಲ್ಲವೂ 
ಬದುಕಿಗೆ ಜ್ಯೋತಿಯಾಗಲಿ,
ನಿರ್ಗುಣ ನಿರಾಕಾರ ಆತ್ಮಕೆ 
ದೇಹವು ಮಂದಿರವಾಗಿರಲಿ...

ಜಗದ ಕತ್ತಲೆಯಿಲ್ಲಿ 
ಮನಸ ಕುರುಡಾಗಿಸದಿರಲಿ,
ಪ್ರೀತಿಯೆಂಬ ಅಮೃತಧಾರೆ 
ಬದುಕ ಜೀವಿಸುತಿರಲಿ...

23 October, 2026

ಕಾಲಾಂತರ...

ಆದಿಯೊಂದಿಗೆ ಅಂತ್ಯವೂ 
ಅಂತ್ಯವೆಂಬುದು ಆರಂಭವೂ,
ಬದುಕ ನಡೆಸುವ ನಾಳೆಗೆ 
ನಿನ್ನೆಯೆಂಬುದು ಸ್ಫೂರ್ತಿಯೂ...

ಕಳೆದು ಹೋದುದ ನೆನೆಯುತಾ 
ಮನಸು ಮರುಗದೇ ಇರಲಾರದು,
ಕಳೆದುಕೊಂಡ ನೋವದು 
ಬದುಕ ಕಾಡದೇ ಬಿಡಲಾರದು...

ಆದಿ ಅಂತ್ಯದ ನಡುವಲಿ 
ನೂರು ಕನಸುಗಳ ಮರಣವೂ,
ನಿಲ್ಲದ ಕಾಲದ ಜೊತೆಯಲಿ 
ಇಲ್ಲದ ನಾಳೆಗಾಗಿ ಪಯಣವೂ...

ಬದುಕ ಜೊತೆಯಲಿ ಜಾತಕ 
ಸಾವಿನ ಜೊತೆಯಲಿ ಸೂತಕ,
ನಡೆಯುವುದೆಲ್ಲ ನಿತ್ಯ ನಿರಂತರ 
ಉಳಿದೆಲ್ಲವೂ ಕಾಲಾಂತರ...

30 September, 2026

ಅರಳಲಿ ನಾಳೆಗಳು...

ಸುಮ್ನೆ ಸುಮ್ನೆ ನಗುವಾಗಲೆಲ್ಲ 
ನಿನ್ನ ನೆನಪೇ ಕಾಡಿದೆ ಬದುಕೇ,
ಜೊತೆಗೆ ಇದ್ದರೂ ಇರಲಾರದಂತೆ 
ಕಾಲ ಇಲ್ಲಿ ದೂರ ದೂರ ಸೆಳೆದಿದೆ...

ಬದುಕು ಬದಲಾಗಲಿಲ್ಲ ಮನಸೇ
ನೋಟ ಬದಲಾಯಿತಷ್ಟೇ,
ಹಳೆಯ ಗಾಯವ ಮರೆತು 
ಹೊಸತೊಂದಕೆ ಹಾತೊರೆಯುವಂತೆ...

ಬದುಕು ಭರವಸೆಯ ಹಾಡು 
ನೂರು ಗೀರುಗಳ ನಡುವೆ,
ನಲಿವಿರಲಿ ನೋವಿರಲಿ 
ನೀನು ಗುನುಗಲೇ ಬೇಕು ಮನಸೇ...

ಹೊಗಳಿಕೆಗೆ ಬದುಕು ಬದಲಾಗೋದಿಲ್ಲ
ನಿಂದಿಸಿದರು ಬೇಜಾರಿಲ್ಲ ಇಲ್ಲಿ, 
ಮುಂದಡಿಯಿಡುವ ಹೆಜ್ಜೆಯಿರೆ ಸಾಕು 
ನಾಳೆಗಳೆಲ್ಲ ನಗುವವು ನೋಡು...

21 September, 2026

ಅಲೆಮಾರಿ...

ಕೊನೆಮೊದಲಿಲ್ಲದ ಬದುಕಿನ ಬಯಲೊಳಗೆ 
ಸಾವಿರ ನೆನಪುಗಳ ಭಾರವ ಹೊತ್ತು,
ಕಾಣದ ನಾಳೆಗಳ ಹುಡುಕುತ್ತಾ 
ನಿಲ್ಲದ ಸಮಯವ ಸವೆಸುವ ಸೋಮಾರಿ...

ನೂರು ನೋವುಗಳ ಜೊತೆಗೆ ಗುದ್ದಾಡಿ 
ಒಂದು ಖುಷಿಯಾ ಬೆನ್ನೇರಿ,
ತಿರುಗೋ ಈ ಭುವಿಯಲ್ಲಿ 
ಇರುವನ್ನೇ ಮರೆತ ಸುತ್ತಾಟ...

ಅಳುವ ನುಂಗಿ ನಗುವ ಬೀರುತ 
ಮೈಮರೆತು ಬದುಕ ಬಯಲೊಳಗೆ,
ಕನಸ ಮರೆತು ಏಕಾಂಗಿಯಂತೆ 
ಬದುಕು ಇಲ್ಲಿ ಅಲೆಮಾರಿ...

ಮೂರು ದಿನದ ಯಾತ್ರೆಯಲಿ 
ನೂರು ತರದ ಮುಖವಾಡ,
ಕಾಮನಬಿಲ್ಲನೇ ನಾಚಿಸುವ 
ಬಣ್ಣಗಳ ಓಕುಳಿಯಾಟ...

31 August, 2026

ಕಾಡುವ ಕವಿತೆ...

ಹಾಡೋ ಹಕ್ಕಿಯ ಮೌನದಲೂ 
ನೂರಾರು ವೇದನೆ ಇರಬಹುದು,
ನೋಡೋ ಕಣ್ಣಿಗೆ ಕಾಣದಿದ್ದರೂ 
ಮಿಡಿಯೋ ಮನಕೆ ಕಾಡಬಹುದು...

ಮೌನವೆಂದರೆ ಬರೆಯ ನೋವಲ್ಲ 
ಕನಸಿನ ಕೊನೆಯೂ ಆಗಿರಬಹುದು,
ಕಾಡದೇ ಉಳಿದ ಭಾವಗಳು 
ಮೌನಕೆ ಜಾರಿ ಬಿಡಬಹುದು...

ನೋವಲ್ಲಿ ಹಾಡು ಹುಟ್ಟೋದಿಲ್ಲ 
ನಲಿವಲ್ಲಿ ಬದುಕು ಕಾಡೋದಿಲ್ಲ,
ನೋವಲ್ಲಿ ಕನಸುಗಳು ಬದುಕೋದಿಲ್ಲ 
ನಲಿವಲ್ಲಿ ಆಸೆಗಳು ಸಾಯೋದಿಲ್ಲ...

ಬರಿದೇ ಭಾವಕೇ ಬದುಕು ನಡೆಯೋದಿಲ್ಲ 
ಕಾಡುವ ಭಾವವು ಹಾಡಾಗೊದಿಲ್ಲ,
ಮನಸಿಂದ ಹುಟ್ಟೋ ಪ್ರೀತಿಯದು 
ಕಾಡಿಸಿ ಪೀಡಿಸಿ ಹಾಡಾಗಿ ಗುನುಗೋದಿಲ್ಲಿ...

12 August, 2026

ಬದುಕೇ...

ಪ್ರೀತಿಸುವೆ ಎಂದಿನಂತೆಯೇ ನಿನ್ನನೂ 
ಬದುಕೇ ಕಾಣದ ನಾಳೆಗಳಲೂ,
ಹರಸಬೇಕು ಎಂದಿನಂತೆಯೇ ನೀನು 
ನನ್ನನೂ ಕಂಡೂ ಕಾಣದಂತೆಯೇ...

ಸೋತು ಬಿಡುವೆ ನಿನಗೆ ಒಮ್ಮೆ ನಾನು 
ಪ್ರತಿಕ್ಷಣವೂ ಗೆಲ್ಲಲು ನಿನ್ನನ್ನೂ,
ಮೌನವಾಗಿ ಒಪ್ಪಿಬಿಡು ಈಗ ನೀನು 
ಕನಸಿನಲ್ಲೂ ಅಪ್ಪಿಕೊಳ್ಳುವೆ ಎಂದೂ ನಾನು...

ಹೆಚ್ಚೇನೂ ಆಸೆಗಳಿಲ್ಲ ನಿನ್ನಿಂದ 
ಇರುವುದೆಲ್ಲವೂ ಹುಚ್ಚು ಆಸೆಗಳೇ ನಿನ್ನಲ್ಲಿ ,
ಮುನಿಸ ಮರೆತು ರಾಜಿಯಾಗು ನೀನಿಲ್ಲಿ 
ನಗುತಾ ನಾನು ನನ್ನೇ ಮರೆವೆ ಜಗದಲ್ಲಿ...

ಒಂದು ಕ್ಷಣದೇ ಮರೆತು ಬಿಡುವೆ 
ನೂರು ನೋವುಗಳ ನಿನ್ನ ಅಂಗಳದಿ,
ಒಂದು ಕ್ಷಣ ನಕ್ಕುಬಿಡು ಸಾಕು ನೀನು 
ನಗುತಲಿರುವೆ ಬಿಟ್ಟು ಹೋಗುವ ಕ್ಷಣದವರೆಗೂ...

31 July, 2026

ಅಮೃತಧಾರೆ...

ನೂರು ಸಾವಿರ ಖುಷಿಯೊಳಗೂ 
ಎದೆಯ ಇರಿಯುವ ನೋವಿಹುದು,
ಒಗಟ ಹೇಳಿದೆ ಬದುಕಿಲ್ಲಿ 
ಬಿಡಿಸಲಾರದೆ ತೋಳಲಾಡಿದೆ ಮನಸಿಲ್ಲಿ...

ನೂರು ಸಾವಿರ ನೆನಪೊಳಗೂ 
ಕಣ್ಣೀರನು ತರಿಸುವ ಕಥೆಯಿಹುದು,
ಬಾನನು ಮುಟ್ಟುವ ಹಂಬಲದೀ 
ಆಸೆಗಳಿಲ್ಲಿ ಮರೀಚಿಕೆಯೂ...

ಏಳು ಸಾಗರದ ಆಳದಲೂ 
ಹುಡುಕಿದೆ ಮನಸು ಮುತ್ತೊಂದ,
ಮರೆವನು ಮರೆಸೋ ಮದ್ದೊಂದ
ಬಯಸಿದೆ ಬದುಕಲಿ ಮನಸಿಂದು...

ನೂರು ಸಾವಿರ ಕನಸುಗಳು 
ಹುಡುಕಿವೆ ಅನಂತ ಆಗಸದಿ,
ಕಾಣದ ನಾಳೆಗಳ ಸಂಭ್ರಮಿಸೋ 
ಅಮೃತಧಾರೆಯ ಮಳೆ ಹನಿಗಳನೂ...