11 August, 2012

ಕೇಳೆ ಗೆಳತಿ...



ಮೂಡಣದ ನೇಸರನು ಪಡುವಣಕೆ ನಡೆದಿಹನು,
ಧರೆಯ ಬೆಳಗಿ ಬಸವಳಿದ ರೀತಿ,
ಪಡುವಣದ ಅಂಚಲ್ಲಿ ರಕ್ತವರ್ಣವ ಚೆಲ್ಲಿ...

ಲಗುಬಗೆಯಲಿ ಹೊರಟಿಹವು ಹಕ್ಕಿಪಿಕ್ಕಿಗಳೆಲ್ಲಾ,
ಗೂಡ ಸೇರುವ ತವಕ ಹೊತ್ತು ಮುಳುಗುವ ಮುನ್ನ,
ದಿನವೆಲ್ಲ ಸುತ್ತಾಡಿ ಕಳೆದ ನೆನಪುಗಳ ಹೊತ್ತು...

ಚಂದಿರನ ಆಗಮನಕೆ ಇಳೆಯು ತಂಪು,
ನೇಸರನ ಬೀಳ್ಕೊಟ್ಟ ವಿರಹದುರಿಯನು ಮರೆತು,
ಅಣಿಯಾಗಿಹಳು ಧರಣಿ ತಂಪು ಬೆಳದಿಂಗಳ ಮೀಯಲು...

ಮೈಯ ಮರೆಸಿದೆ ಬೆಳದಿಂಗಳು ನಕ್ಕು,
ಸೋಕುತಿದೆ ತಂಗಾಳಿ ಬಿಸಿಮೈಯ ಹಿತವಾಗಿ,
ನಿನ್ನ ನೆನಪಿನಲೆಗಳು ಉಕ್ಕಿಹವು ಮೇರೆ ಮೀರಿ...

ಹೊತ್ತು ಸರಿಯುವ ಮುನ್ನ,ಕನಸು ಕರಗುವ ಮುನ್ನ,
ನಿನ್ನ ಜೊತೆಯಾಗಿ ಸನಿಹದಲಿ ಕೂಡುವ ಆಸೆ,
ನಿನ್ನ ಭುಜಕೆ ತಲೆಯಾನಿಸಿ ಕಣ್ಮುಚ್ಚುವ ಆಸೆ ಹಗಲು ರಾತ್ರಿಗಳ ಒಡನಾಟದಲಿ.....