31 August, 2026

ಕಾಡುವ ಕವಿತೆ...

ಹಾಡೋ ಹಕ್ಕಿಯ ಮೌನದಲೂ 
ನೂರಾರು ವೇದನೆ ಇರಬಹುದು,
ನೋಡೋ ಕಣ್ಣಿಗೆ ಕಾಣದಿದ್ದರೂ 
ಮಿಡಿಯೋ ಮನಕೆ ಕಾಡಬಹುದು...

ಮೌನವೆಂದರೆ ಬರೆಯ ನೋವಲ್ಲ 
ಕನಸಿನ ಕೊನೆಯೂ ಆಗಿರಬಹುದು,
ಕಾಡದೇ ಉಳಿದ ಭಾವಗಳು 
ಮೌನಕೆ ಜಾರಿ ಬಿಡಬಹುದು...

ನೋವಲ್ಲಿ ಹಾಡು ಹುಟ್ಟೋದಿಲ್ಲ 
ನಲಿವಲ್ಲಿ ಬದುಕು ಕಾಡೋದಿಲ್ಲ,
ನೋವಲ್ಲಿ ಕನಸುಗಳು ಬದುಕೋದಿಲ್ಲ 
ನಲಿವಲ್ಲಿ ಆಸೆಗಳು ಸಾಯೋದಿಲ್ಲ...

ಬರಿದೇ ಭಾವಕೇ ಬದುಕು ನಡೆಯೋದಿಲ್ಲ 
ಕಾಡುವ ಭಾವವು ಹಾಡಾಗೊದಿಲ್ಲ,
ಮನಸಿಂದ ಹುಟ್ಟೋ ಪ್ರೀತಿಯದು 
ಕಾಡಿಸಿ ಪೀಡಿಸಿ ಹಾಡಾಗಿ ಗುನುಗೋದಿಲ್ಲಿ...

12 August, 2026

ಬದುಕೇ...

ಪ್ರೀತಿಸುವೆ ಎಂದಿನಂತೆಯೇ ನಿನ್ನನೂ 
ಬದುಕೇ ಕಾಣದ ನಾಳೆಗಳಲೂ,
ಹರಸಬೇಕು ಎಂದಿನಂತೆಯೇ ನೀನು 
ನನ್ನನೂ ಕಂಡೂ ಕಾಣದಂತೆಯೇ...

ಸೋತು ಬಿಡುವೆ ನಿನಗೆ ಒಮ್ಮೆ ನಾನು 
ಪ್ರತಿಕ್ಷಣವೂ ಗೆಲ್ಲಲು ನಿನ್ನನ್ನೂ,
ಮೌನವಾಗಿ ಒಪ್ಪಿಬಿಡು ಈಗ ನೀನು 
ಕನಸಿನಲ್ಲೂ ಅಪ್ಪಿಕೊಳ್ಳುವೆ ಎಂದೂ ನಾನು...

ಹೆಚ್ಚೇನೂ ಆಸೆಗಳಿಲ್ಲ ನಿನ್ನಿಂದ 
ಇರುವುದೆಲ್ಲವೂ ಹುಚ್ಚು ಆಸೆಗಳೇ ನಿನ್ನಲ್ಲಿ ,
ಮುನಿಸ ಮರೆತು ರಾಜಿಯಾಗು ನೀನಿಲ್ಲಿ 
ನಗುತಾ ನಾನು ನನ್ನೇ ಮರೆವೆ ಜಗದಲ್ಲಿ...

ಒಂದು ಕ್ಷಣದೇ ಮರೆತು ಬಿಡುವೆ 
ನೂರು ನೋವುಗಳ ನಿನ್ನ ಅಂಗಳದಿ,
ಒಂದು ಕ್ಷಣ ನಕ್ಕುಬಿಡು ಸಾಕು ನೀನು 
ನಗುತಲಿರುವೆ ಬಿಟ್ಟು ಹೋಗುವ ಕ್ಷಣದವರೆಗೂ...

31 July, 2026

ಅಮೃತಧಾರೆ...

ನೂರು ಸಾವಿರ ಖುಷಿಯೊಳಗೂ 
ಎದೆಯ ಇರಿಯುವ ನೋವಿಹುದು,
ಒಗಟ ಹೇಳಿದೆ ಬದುಕಿಲ್ಲಿ 
ಬಿಡಿಸಲಾರದೆ ತೋಳಲಾಡಿದೆ ಮನಸಿಲ್ಲಿ...

ನೂರು ಸಾವಿರ ನೆನಪೊಳಗೂ 
ಕಣ್ಣೀರನು ತರಿಸುವ ಕಥೆಯಿಹುದು,
ಬಾನನು ಮುಟ್ಟುವ ಹಂಬಲದೀ 
ಆಸೆಗಳಿಲ್ಲಿ ಮರೀಚಿಕೆಯೂ...

ಏಳು ಸಾಗರದ ಆಳದಲೂ 
ಹುಡುಕಿದೆ ಮನಸು ಮುತ್ತೊಂದ,
ಮರೆವನು ಮರೆಸೋ ಮದ್ದೊಂದ
ಬಯಸಿದೆ ಬದುಕಲಿ ಮನಸಿಂದು...

ನೂರು ಸಾವಿರ ಕನಸುಗಳು 
ಹುಡುಕಿವೆ ಅನಂತ ಆಗಸದಿ,
ಕಾಣದ ನಾಳೆಗಳ ಸಂಭ್ರಮಿಸೋ 
ಅಮೃತಧಾರೆಯ ಮಳೆ ಹನಿಗಳನೂ...

15 July, 2026

ಬಾ ಮಳೆಯೇ...

ಮತ್ತೆ ಮಳೆಯಾಗಿದೆ ಬದುಕಲಿ 
ಕನಸುಗಳ ಹೊಳೆಯಾಗಿದೆ ಮನಸೀಗ,
ತುಂಬಿ ತುಳುಕುತಿರೆ ಭಾವಗಳ ಝರಿಯೂ 
ಕಾರ್ಮೋಡ ಕರಗುತಿದೆ ಬಾಳ ಆಗಸದಲಿ...

ಎದೆ ಮುಗಿಲು ಹಗುರಾಗಿ ಮನಸೀಗ ತಂಪಾಗಿ 
ಆಸೆಗಳ ಹೊಂಗಿರಣ ಮೂಡುತ್ತಿವೆ,
ಬದುಕೆಂಬ ಇಳೆಗೀಗ ನವ ವಸಂತ 
ಹಚ್ಚ ಹಸುರಾದ ರಾಗ ಭಾವಗಳ ಜೊತೆಗೆ...

ಭಾವಗಳ ಝರಿಯೀಗ ನಿರ್ಮಲ 
ಕಳೆದುಕೊಂಡು ಹಳೆಯ ಕಸಕಡ್ಡಿಗಳ,
ಶುಭ್ರತೆಯ ಮಡಿಲಿನಲಿ ಹಿತವಾಗಿ 
ಕನಸುಗಳ ನೀರಾಟ ನಡೆದಿಹುದು ಸ್ವಚ್ಚಂದದೇ...

ಹಚ್ಚ ಹಸುರಿನ ಹೊಚ್ಚ ಹೊಸತನದಿ 
ಬದುಕೆಂಬ ಇಳೆಯಿಲ್ಲಿ ನಗುತಿರಲು ಹಿತವಾಗಿ,
ಮತ್ತೆ ಮಳೆಯಾಗಲು ಮನಸು ನವಿಲಾಗಿದೆ 
ನಗುವಿನ ಹೊನಲಾಗಿದೆ ಬದುಕಿನ ಬಯಲು...

29 June, 2026

ಅನಾವರಣ...

ಬದುಕೋದು ಸುಲಭ ಇಲ್ಲಿ ನೋವುಗಳ ಜೊತೆಗೆ 
ಕಾಲ ಕಳೆಯೋದು ಕಷ್ಟ ನೆನಪುಗಳ ಜೊತೆಗೆ,
ನಗುವುದೇನೋ ಸುಲಭ ಇಲ್ಲಿ ಗುಂಪಿನೊಳಗೆ 
ಮನವ ಸಂತೈಸುವುದು ಕಷ್ಟ ಏಕಾಂತದೊಳಗೆ...

ಪರರ ಸಂತೈಸುವುದೇನೋ ಸುಲಭ ಇಲ್ಲಿ 
ನಿರ್ಲಿಪ್ತವಾಗಿ ದಾರಿ ಸವೆಸೋದು ಕಷ್ಟ ಬದುಕಲ್ಲಿ,
ನೂರು ಕನಸುಗಳಿಗೆ ಜೀವವಾಗೋದು ಸುಲಭ 
ಮನದೊಳಗೆ ನೂರು ಆಸೆಗಳ ಸಾಕೋದು ಕಷ್ಟ ...

ಭರವಸೆಯ ತುಂಬುವುದು ಸರಳ ಇಲ್ಲಿ 
ನಂಬಿಕೆಯಾ ಉಳಿಸೋದು ಕಷ್ಟ ಜಗದಲ್ಲಿ,
ಪ್ರೀತಿಯ ಹಂಚೋದು ಸುಲಭ ಬದುಕಲ್ಲಿ 
ಬದುಕ ಪ್ರೀತಿಸೋದೇ ಕಷ್ಟ ನಾಳೆಗಳಲ್ಲಿ...

ಜಗದ ಪ್ರಶ್ನೆಗಳಿಗೆ ಉತ್ತರಿಸುವುದೇನೋ ಸುಲಭ 
ಅತೃಪ್ತ ಆತ್ಮಗಳ ಕುಹಕಕ್ಕೆ ಕಿವಿಯಾಗುವುದು ಕಷ್ಟ,
ನಾವಿರುವಂತೆ ಬದುಕುವುದು ಚಂದ ಇಲ್ಲಿ 
ಬೇರೆಯವರಿಗಾಗಿ ನಟಿಸೋದೇ ಕಷ್ಟ ಬದುಕಲ್ಲಿ...

07 June, 2026

ಮಾಯಾವಿ...

ಅರಳು ಮರಳು ಮನಸಿಗಿಲ್ಲಿ ಬದುಕೇ 
ನೀನೆಷ್ಟು ದಿನದ ಸಂತೆಯೆಂಬುದ ಮರೆತೇ,
ಏನು ಮಾಯೆಯೋ ಏನು ಲೀಲೆಯೋ ಮನಸೇ 
ಇರುವುದೆಲ್ಲವ ಮರೆತು ಏನೋ ಚಿಂತೆ...

ಜಗದ ಭಾರವ ಹೊತ್ತ ತರದಿ ಇಲ್ಲಿ  
ಮನಸ ಭಾರವ ಹೊರುವುದೇ ದೇಹ,
ಬದುಕೇ ನೀನಿಲ್ಲಿ ಭಾರವಾದಂತೆ 
ಏಕೆ ಮಾಡುತೀ ಇಲ್ಲಿ ಚಿಂತೆಯ ಸಂತೆ...

ನಗುನಗುತಾ ತಿರುಗಬೇಕು ಭೂಮಿ ಮೇಲೆ 
ಒಂದಷ್ಟು ಭಾರಗಳ ಇಳಿಸಿ ಹೆಗಲ ಮೇಲಿಂದ,
ಎದೆಯ ಮೇಲೆ ಖುಷಿಯ ಹೂಗಳ ಇರಿಸಿ 
ನಿನ್ನೆಗಳು ಕೂಡ ಹಿಂತಿರುಗಿ ನಗುವಂತೆ ...

ಉಸಿರು ಭಾರವಾದಿತು ದೇಹಕೇ 
ಮೌನದಲ್ಲಿ ಮನಸು ಕಳೆದುಹೋದಂತೆಲ್ಲಾ,
ಹೊಸದೊಂದು ಹುಟ್ಟು ಬೇಕಾಗಿದೆ ಇಲ್ಲಿ 
ನಗುನಗುತಾ ಮಾಡಲಿಲ್ಲಿ ಮೂರು ದಿನದ ಸಂತೆ...

31 May, 2026

ನೆನಪೆಂಬ ಬೆರಗು...

ಎದೆಯ ಒಳಗೆ ಬೆಳಗುತಿರುವ ದೀಪಕೆ 
ನೆನಪುಗಳೇ ಮುಗಿಯದಾ ತೈಲವೂ,
ಬದುಕಿಗಿಲ್ಲಿ ಬೆಳಕಿನ ಭರವಸೆಯೂ 
ನಾಳೆಗಳ ಕನಸುಗಳೇ ಬತ್ತಿಯೂ...

ಸಂಭ್ರಮದ ಬದುಕಿಗಿಲ್ಲಿ ನಿತ್ಯವೂ ಜಾತ್ರೆಯೇ 
ನೆನಪುಗಳ ಮೆರವಣಿಗೆಯಾ ಯಾತ್ರೆಯಲಿ,
ಕನಸುಗಳಿಲ್ಲದಿರೆ ಬದುಕಿನ ಪಯಣದಲಿ 
ತುಂಬಿದ ಜಾತ್ರೆಯೂ ಒಂಟಿ ಒಂಟಿಯೇ...

ಹಚ್ಚಿದ ದೀಪ ಆರದಿರಲಿ ಬದುಕಲಿ 
ನೆನಪುಗಳು ದಾರಿ ತೋರುತಿರುವವರೆಗೆ,
ಬದುಕೆಂಬ ಬನದಲ್ಲಿ ಹೊಸ ಹೂವು ಅರಳಿದರೂ 
ಹಳೆಯ ಘಮವೆಂದು ಮರೆಯದಂತೆ...

ಜೊತೆಯಿರದ ಜೀವಗಳ ತುಂಬಿಕೊಂಡು 
ಜೀವ ಬೆಸೆಯುವ ಹಾಡಾಗುತಾ,
ಮರೆವಿನ ಮರೆಯಲ್ಲಿ ತುಸು ಗುನುಗುತಾ 
ಬದುಕಿಗೆ ಅಮೃತವ ಉಣಬಡಿಸುತಾ...

22 May, 2026

ನೆನಪೆಂಬ ಅಮೃತ...

ನೆನಪುಗಳೇ ಹಾರ ಬದುಕ ಯಾತ್ರೆಯಲಿ 
ನೆನಪುಗಳೇ ಭಾರ ಕಾಲ ಸರಿದಂತೆ,
ನೋವಿದ್ದರೂ ನಲಿವಿದ್ದರೂ ಸರಿಯೇ 
ನೆನಪುಗಳೇ ಜೊತೆಯಿಲ್ಲಿ ಕೊನೆವರೆಗೆ...

ನಿನ್ನೆಯ ಸಂಭ್ರಮ ಈ ನೆನಪು 
ನಾಳೆಗಳ ಕನಸೇ ಇಲ್ಲಿ ಕಂಗೊಳಿಸು,
ಕಣ್ಣಹನಿ ಬಿಂದುವು ಆ ನೆನಪು 
ಬದುಕಲಿ ಕಥೆಗಾರ ಕೊನೆವರೆಗೂ...

ಬದುಕಿನ ಸಡಗರವೇ ನೆನಪು 
ಸವೆಯುವ ಹೆಜ್ಜೆಗಳ ಗುರುತು,
ನಾಳೆಯೆಂಬ ಕಾಣದ ಕಡಲಿಗೆ 
ದಿಕ್ಷೂಚಿ ನಿನ್ನೆಗಳಾ ಆ ನೆನಪು...

ಮೊದಲ ಪ್ರೀತಿ ಒಂದು ನೆನಪು 
ಮನಸು ಜಾರಿಹೋದ ಕ್ಷಣಗಳವು,
ಕಳೆದು ಹೋದ ಬಂಧಗಳು 
ಬದುಕಿನ ಅಮೃತಕಾಲ ಆ ನೆನಪುಗಳು...

30 April, 2026

ನಕ್ಕರೆ ಸ್ವರ್ಗ...

ನಗುವಿನ ಹಾಸಿಗೆ ಬದುಕಿದು ಹಾಸಿದೆ 
ಮನಸಿನ ಮನೆಯೊಳು ಭಾವವ ಹೊಸೆಯುತಾ,
ಕನಸಿನ ಲೋಕದಿ ಕನವರಿಸುತ ಈ ಮನ 
ಚಿಟ್ಟೆಯ ಹಾಗೆ ಹಾರುತಾ ಕಳೆದಿದೆ...

ಬದುಕಿದು ಬೃಂದಾವನ ನಗುವೂ ಜೊತೆಗಿರೆ 
ಮನಸೇ ನಂದನ ಕನಸದು ಮುಡಿದಿರೆ,
ತೂಗುವ ತೊಟ್ಟಿಲು ಮನಸಿನ ಬಟ್ಟಲು 
ನಗುವೇ ಶೃಂಗಾರ ಬದುಕಿನ ನಾಳೆಗೆ...

ಮರೆಯುತ ಚಿಂತೆಯಾ ಮರೆಸುತ ಬದುಕನು 
ನಗುವಿನ ತೋಟದಿ ನಡೆದಿರೆ ಬದುಕಿದು,
ಮೆರೆಸುತ ಪ್ರೀತಿಯಾ ಮನಸ ತೊಟ್ಟಿಲು 
ಹಾಡಿದೆ ನಗುವಿನ ಹೊಸ ರಾಗ...

ಮೌನದ ಹಾದಿಗೆ ನಗುವೇ ದೀಪವೂ 
ಮಾತಿನ ಹಾಡಿಗೆ ನಗುವಿದು ಸಂಗೀತವೂ,
ನಗುವೇ ಭಾಗ್ಯವು ನಗುವುದೇ ಆರೋಗ್ಯವೂ 
ಬದುಕಿದು ಮೆರೆಯಲಿ ನಾಳೆಗಳ ನಾಳೆಯೊಳಗೂ...

25 March, 2026

ಹಾಡು ಪಾಡು...

ಒಂಟಿ ಹಕ್ಕಿಯ ಹಾಡಿದು 
ಹುಚ್ಚು ಮನಸಿನ ಪಾಡಿದು,
ನೋವು ಇಲ್ಲದ ಮನಸದು 
ನಗುವೇ ತುಂಬಿದ ಮೊಗವದು...

ಕೋಪವಿಲ್ಲ ಇಲ್ಲಿ ರೋಷವಿಲ್ಲ 
ಹೋರಾಟವಿಲ್ಲ ಇಲ್ಲಿ ಹಾರಾಟವಿಲ್ಲ,
ಬದುಕು ನಡೆಸಿದ ದಾರಿಯಲಿ 
ಹೆಜ್ಜೆಗಳಿಲ್ಲಿ ಸಾಗುತಿಹುದು...

ಪ್ರೀತಿಯಿದೆ ಇಲ್ಲಿ ಸ್ನೇಹವಿದೆ 
ಬದುಕ ತುಂಬಾ ಕನಸು ಇದೆ,
ಹುಚ್ಚು ಕನಸುಗಳ ಭರವಸೆಯಲಿ 
ಬದುಕು ನಾಳೆಗಳ ಪ್ರೀತಿಸಿದೆ...

ಬಂಧವಿದೆ ಇಲ್ಲಿ ಅನುಬಂಧವಿದೆ 
ಕಾಲದ ಜೊತೆಗಿನ ಸಂಭಂದವಿದೆ,
ನೋವಲ್ಲೂ ನಗುವ ಕಲೆಯಿದೆ 
ಖುಷಿಗೂ ಕಣ್ಣೀರಾಗುವ ವರವಿದೆ...

19 March, 2026

ಭಾವ ಸಾಗರ...

ಬರಹಗಳೇ ನೀವು ಕುರುಹುಗಳು 
ಮನಸಿನ ಕನ್ನಡಿಯ ಪ್ರತಿಬಿಂಬಗಳು,
ಭವ ಸಾಗರದಿ ಜೀಕುವ ಬದುಕಿಗೆ 
ಭಾವ ಸಾಗರದಾಳದ ಮುತ್ತುಗಳು ...

ಕಥೆಗಳೇ ನೀವು ಮನಸಿನ ವ್ಯಥೆಗಳೇ 
ಚದುರಿದ ಕನಸುಗಳ ಬದುಕಲಿ,
ಅಕ್ಷರ ರೂಪದೆ ನೀವು ಪಾಠಗಳೇ 
ಎಲ್ಲೋ ಯಾರಿಗೋ ಈ ಜಗದೊಳಗೆ...

ಕವನಗಳೇ ಇಲ್ಲಿ ಮೇಘ ಸಂದೇಶ 
ಬದುಕಿನ ಪ್ರತಿ ಹೆಜ್ಜೆಯಲೂ,
ಪ್ರೀತಿಯಾ ಕನಸನು ಹೊತ್ತಿರುವ 
ಪ್ರತಿ ಜೀವಕೂ ನೀವು ಅಮೃತವೇ...

ಆಸೆಯ ಕಂಗಳ ಹೊಳಪಿನಲಿ 
ಅಕ್ಷರಗಳಾಗಿವೆ ಪದ ಭಂಡಾರ,
ಭರವಸೆ ತುಂಬಿದ  ಒಡಲೊಳಗೆ 
ಸರಿಗಮವೆಂದಿದೆ ಬದುಕಿನ ಸಾಹಿತ್ಯ...

25 February, 2026

ನಿನ್ನವರಾರು ಬದುಕೇ...

ಬದುಕ ಬನದೊಳಗೆ ಮನಸ ಕಡಲೊಳಗೆ 
ಸಾವಿರ ಕನಸುಗಳ ನೂರು ನೆನಪುಗಳ ಮಾಲೆ,
ಬಂದು ಹೋದವರ ಬಂಧುಗಳಾದವರ 
ಲೆಕ್ಕವೆಲ್ಲಿದೆ ಮನಕೇ ಆ ಅನುಭಾವಕೆ...

ಎಲ್ಲೋ ಹರಿವ ತೊರೆ ಎಲ್ಲೋ ಧುಮುಕುವ ಝರಿ 
ಲೆಕ್ಕವಿಟ್ಟವರಾರು ಹರಿವ ಭಾವಕೇ,
ಕಳೆದುಕೊಂಡವರ ಕಳೆದು ಹೋದವರ 
ಹುಡುಕಿಕೊಟ್ಟಿತೇ ಬದುಕು ಕಾಲದ ಹರಿವಿನೊಳು...

ನೂರು ನೆನಪುಗಳ ತುಂಬಿ ನೂರು ಕನಸುಗಳ ತುಂಬಿ 
ಮನಸ ನಗಿಸಿದ ಬದುಕ ಹರಸಿದ ಬಂಧವಿಲ್ಲಿ,
ಯಾತ್ರೆಯ ಮುಗಿಸಿ ಹೊರಟು ನಿಂತಾಗ 
ಮನಸು ಮರುಭೂಮಿಯಂತೆಯಿಲ್ಲಿ...

ಹುಟ್ಟು ಸಾವಿನ ನಡುವೆ ಬದುಕು ನಡೆಯುತಿರಲು 
ನಿನ್ನವರಾರು ಇಲ್ಲಿ ಮನವೇ ಜೊತೆಗಾರರಾರು ಬದುಕೇ,
ಇರುವಷ್ಟು ದಿನವಷ್ಟೇ ಜಾತ್ರೆ ಮಿಕ್ಕಿದ್ದೆಲ್ಲವೂ ಯಾತ್ರೆ 
ನೂರು ನೆನಪುಗಳ ಜೋಳಿಗೆಯ ಜೊತೆಗೆ...

31 January, 2026

ಬೆಳಕು...

ಸವೆಯುವ ಹಾದಿಯೊಳು ಸರಿದಿದೆ ಕಾಲ 
ಸರಿಸುತ ಬದುಕಿನ ಭಾವೋದ್ವೆಗ,
ಹೊಸ ಹಾಡು ಹೊಸ ಪಾಡು ಭಾವಕ್ಕೆ 
ಹೊಸದೇನಿಲ್ಲ ನಿನ್ನೆಯಂತೆಯೇ ಎಲ್ಲಾ ಬದುಕಿಗೆ...

ಸರಿದು ಹೋದರೂ ಹರಿದು ಹೋಗದ ಮಾಯೆ 
ನೆನಪೆಂಬುದು ನೆಪವೂ ಇಲ್ಲಿ ಬದುಕಿಗೆ,
ಬಿಟ್ಟೆನೆಂದರೂ ಬಿಡದೇ ಕಾಯುವ ಛಾಯೆ
ನಿನ್ನೆ ನಾಳೆಗಳೆಂಬ ಹಂಗಿಲ್ಲದೆ...

ಕಳೆದುಹೋದುದ ಹುಡುಕುತಿದೆ ಮನವು
ಪುನಃ ಬರಲಾರದೆಂಬ ಅಂತರ್ಯದ ಕೂಗು ಕೇಳದೇ,
ಮತ್ತೆ ಮತ್ತೆ ಮೂಡುವುದು ಇಲ್ಲಿ ಭರವಸೆಯ ಬೆಳಕು
ನೂರು ಹಂಬಲಗಳ ಬಲದ ನಡುವೆ...

ಒಲವೆಂಬ ಚಂದ್ರಮ ಬದುಕ ಹಾದಿಯಲಿ 
ಬೆಳದಿಂಗಳಾಗಿ ಬೆಳಕ ಬೀರುತಿರಲು,
ಹೊಸದೊಂದು ಅಧ್ಯಾಯ ಬದುಕ ಪುಟದಲಿ
ನೂರು ನೋವುಗಳ ಮರೆತು ಮುನ್ನಡೆಯಲು...