30 November, 2021

ಮಾಯಾಬಜಾರು...

ಬದುಕು ಮಾಯಾಬಜಾರು
ಇಲ್ಲಿ ಕನಸುಗಳದೇ ಕಾರುಬಾರು,
ಒಲವು ಕಾಡುವುದು ಹಗಲಿರುಳು
ಮನಸೇ ನೀನಿಲ್ಲಿ ಹುಷಾರು...

ನೆನಪುಗಳ ತೊಟ್ಟಿಲಲಿ
ಮನಸು ಆಗಾಗ ತೂಗುವುದು,
ಕನಸುಗಳ ತೂಕಡಿಕೆಯಲಿ
ಮನಸಿಲ್ಲಿ ಕಂಗಾಲು...

ಭಾವಗಳ ಉಯ್ಯಾಲೆಯಲಿ
ಬದುಕಿಲ್ಲಿ ಜೀಕುತಿಹುದು,
ಅಳುವಿನ ಜೊತೆಗೆ ನಗುವಿರಲು
ಮನಸಿಲ್ಲಿ ಮಗುವಾಗಿಹುದು...

ಇದು ಮಾಯಾಬಜಾರು 
ಇಲ್ಲಿ ಭಾವನೆಗಳ ಕರಾರು,
ಬದುಕಿನ ಮಾರುಕಟ್ಟೆಯಲಿ
ಸಂಬಂದಗಳೇ ಹರಾಜು...

20 November, 2021

ಬದುಕು...

ಇರುವುದು ಒಂದೇ ಬದುಕು
ಕನಸುಗಳು ಇಲ್ಲಿ ನೂರಾರು,
ಹತ್ತಾರು ಜಂಜಾಟಗಳ ನಡುವೆ
ಉಳಿಯುವುದು ಮಾತ್ರ ಕಣ್ಣೀರು...

ಇರುವುದು ಒಂದೇ ಮನಸು
ಭಾವನೆಗಳು ಮಾತ್ರ ಹಲವಾರು,
ಬದುಕಿನ ಪಯಣದ ನಡುವೆ
ನಿಲ್ದಾಣಗಳಿಲ್ಲಿ ಹತ್ತಾರು...

ಬದುಕಲೇಬೇಕು ಇಲ್ಲಿ
ನೋವು ನಲಿವಿನ ಜೊತೆಗೆ,
ಕಳೆಯಲೇಬೇಕು ಕಾಲ
ಇಷ್ಟ ಕಷ್ಟಗಳ ಜೊತೆಗೆ..

ಕಾಡುವುದು ನೂರು ನೆನಪು
ಭಾರವ ಹೊರಲೇಬೇಕಿಲ್ಲಿ ಮನಸು,
ಸಾಗಲೇಬೇಕು ಬದುಕು
ಕಾಲದ ಕರೆ ಬರುವವರೆಗೂ...