ಮರೆಯುವುದು ಜೀವ
ಮರೆಸುವುದು ಭಾವ,
ಕಾಲದ ಲೀಲೆಯಲಿ
ಬದುಕಿನ ಯಾತ್ರೆಯಲಿ...
ಮೆರೆಸುವುದು ಕಾಲ
ಮೆರೆಯುವುದು ಬದುಕು,
ಮರೆಸುವುದು ಕಾಲ
ವಿಧಿಯ ವಿಧಾನದಂತೆ...
ಜ್ಞಾನವೆಂಬ ಬೆಳಗು
ಬದುಕಿಲ್ಲಿ ಬೆರಗು,
ನಿನ್ನೆ ನಾಳೆಗಳ ಸೆರಗಿನಲಿ
ಒಂದಿಷ್ಟು ಹೊಸದು...
ಲೋಕದಾ ಡೊಂಕಿನೊಳು
ಮನಸೇ ಮಂಕಾಗಿರಲು,
ಬದುಕೇ ಇಲ್ಲಿ ಬೆರಗು
ಒಂದಷ್ಟು ತಿರುವಿನೊಳು...
ಲೋಕದಾ ಬಟ್ಟಬಯಲೊಳಗೆ
ಹಗಲು ಬೆಳಕಿನ ಚಿತ್ತಾರ,
ಬದುಕಿನ ಬಯಲೊಳಗೆ
ನೋವು ನಲಿವುಗಳ ಅವತಾರ...
ಕನಸುಗಳೊಂದಿಗೆ ಈ ಬದುಕು
ಆಸೆಗಳೊಂದಿಗೆ ಈ ಮನಸು,
ನಾಳೆಯ ನೆಮ್ಮದಿಗಾಗಿ ಇಲ್ಲಿ
ಆಸೆಗಳ ಮಾರಿದೆ ಓ ಬದುಕೇ...
ಪ್ರೀತಿಯೊಂದಿಗೆ ಈ ಜಗವೂ
ಸ್ನೇಹದಿಂದಲೇ ಈ ಒಲವು,
ಪ್ರೀತಿಯ ಅಮೃತ ಕಡೆಯಲು
ಸ್ನೇಹವೇ ಕರಗಿದೆ ಮಂಥನದಿ...
ತಾಳ್ಮೆಯ ಪಡೆಯಲು ಬದುಕಲ್ಲಿ
ಕೋಪವ ಮರೆತೆ ಲೋಕದಲಿ,
ಅಳುವನು ಮರೆಯಲು ಬದುಕಲ್ಲಿ
ನಗುವನೇ ಖರೀದಿ ಮಾಡಿರುವೆ...