31 July, 2025

ಭರವಸೆ...

ನೂರು ನೋವುಗಳ ನಡುವೆ 
ಆಸೆಯ ಚಿಗುರೊಂದು ಹುಟ್ಟಿ, 
ಮನಸು ನಗಲು ಹರುಷದಲಿ
ಬದುಕೇ ಬೃಂದಾವನ ಜಗದೊಳಗೆ...

ಕಾಣದಾ ನಾಳೆಗಳ ಕತ್ತಲೆಯಲಿ
ಕಾಲಿಡಲು ಬದುಕು ಅಳುಕುತಿರಲು,
ಕನಸೆಂಬ ಮಿಂಚು ಹುಳವೊಂದು ಓಡಾಡೆ
ನಾಳೆಗಳ ದಾರಿಯು ಬೆಳಗಬಹುದಿಲ್ಲಿ...

ಯಾರು ಬಲ್ಲರು ಇಲ್ಲಿ ನಾಳೆಗಳ ಆಳ
ಒಂದಷ್ಟು ಭರವಸೆಯಷ್ಟೇ ಬದುಕು,
ನಾನು ಇಲ್ಲ ಇಲ್ಲಿ ನೀನು ಅಲ್ಲಾ
ದಾರಿ ಸಾಗಿದಂತೆ ತಿಳಿವುದು ಸತ್ಯವಿಲ್ಲಿ...

ಸುರಿಸಬೇಕು ಒಂದಷ್ಟು ಕಣ್ಣೀರ ಇಲ್ಲಿ 
ಖುಷಿಗಾದರೂ ಇಲ್ಲ ನೋವಿಗಾದರೂ,
ಹರಿಸಬೇಕು ಒಂದಿಷ್ಟು ಹನಿಗಳ ಬೆವರಿನಲ್ಲಿ
ನಾಳೆಗಳು ನಮ್ಮದೇ ಎಂಬ ದೃಢತೆಯಲಿ...

19 July, 2025

ನಂಟೆಂಬ ಅಂಟು...

ಬದುಕೆಲ್ಲ ಇಲ್ಲಿ ಭರವಸೆಗಳ ಗಂಟು
ಓಡುವ ಕಾಲಕ್ಕೂ ಬೆಸೆದಿದೆ ನೂರು ನಂಟು,
ಭಾವಯಾನದ ಪ್ರತಿ ಹೆಜ್ಜೆಯು ಸೇರುತಾ 
ಮನಸಿಗೆ ನೂರು ಕನಸುಗಳ ನಂಟು...

ಬಂದು ಹೋಗೋ ನಡುವೆ ಇಲ್ಲಿ 
ನೂರು ಬಂಧಗಳ ನಂಟೆಂಬ ಅಂಟು,
ಮನಸಿಗೆ ಪ್ರೀತಿಯ ನಂಟು 
ದೇಹಕ್ಕೆ ಉಸಿರಿನ ಅಂಟು...

ದೇಹ ಆತ್ಮಗಳ ನಡುವಿನ ನಂಟು 
ಕಾಲವೇ ಬೆಸೆದಾ ಗಂಟು,
ಅಂಟಿಕೊಂಡಿರುವ ನಂಟು ಇದಲ್ಲ
ಎಲ್ಲವೂ ಸಮಯದ ಗುಟ್ಟು...

ಹುಟ್ಟಿಗೂ ಸಾವಿನ ನಂಟು 
ನಡುವೆ ಇಲ್ಲಿ ನೂರೆಂಟು ಗುಟ್ಟು,
ಉಸಿರಿಗೂ ಇಲ್ಲಿ ಭಾವಗಳ ನಂಟು
ಬದುಕು ತುಂಬಾ ನಂಟೆಂಬ ಅಂಟು...