11 January, 2020

ನೆರಳು...

ಕತ್ತಲು ಬೆಳಕಿನ  ಆಟವಿದು
ಬದುಕೇ ನೀ ನಡೆಸುವ ರೀತಿಯದು,
ಬೆಳಕ ಕಾಣಲು ಮನ ಹಂಬಲಿಸೇ
ಮಗ್ಗಲು ಬದಲಿಸುವೆ ನೀ ಏತಕೇ...

ಕತ್ತಲೆಂದರೆ ಭಯವೇನು ಇಲ್ಲಾ
ನಕ್ಷತ್ರಗಳ ನೋಡುವ ತವಕವಿದೆ,
ನೀ ತೋರಿಸೋ ಕತ್ತಲೆಯಲಿ
ಕೆಲವೊಮ್ಮೆ ನಕ್ಷತ್ರಗಳು ಮಿನುಗುವುದೇ ಇಲ್ಲಾ...

ಖಾಲಿತನದ ಕತ್ತಲದು
ನೆರಳು ಕೂಡ ಜೊತೆಯಾಗುವುದೇ ಇಲ್ಲಾ,
ಏನೂ ಕಾಣದೆ ಭ್ರಮೆಯೊಳಗೆ
ಮನಸು ಬೆದರುವುದು ಸುಮ್ಮನೆ...

ನೀ ತೋರಿಸೊ ಬೆಳಕದುವೇ
ಮಳೆಗಾಲದ ಕೋಲ್ಮಿಂಚಂತೆ,
ದೃಷ್ಟಿ ಹಾಯಿಸೋ ಮುಂಚೆನೇ
ಕರಗಿ ಹೋಗುವುದು ಅಂಧಕಾರದೊಳು...

ಕತ್ತಲ ಒಳಗೂ ಇಲ್ಲಿ ಬೆಳಕಂತೆ
ಬೆಳಕಿನ ಸುತ್ತಾ ಕತ್ತಲೆಯೂ,
ಬದುಕೇ ನೀ ತೆರೆದಿಡುವ ವಿಸ್ಮಯಕೆ
ಹಗಲು ಇರುಳಿನ ನೆರಳಿಲ್ಲಾ...

No comments:

Post a Comment