26 July, 2020

ಅಂತರಾತ್ಮ...


ಜಗದ ಮಾಯೆಯಲಿ ಬಂಧಿ ನಾನು
ಭವದ ಬೇಗೆಯಲಿ ಬೆಂದೆನೂ,
ಕಾಯುವಾ ಶಕ್ತಿ ನೀನು
ನನ್ನ ಒಳ ಹೊರಗಲೂ...

ನೀನಿಲ್ಲಿ ಭಕ್ತಿ ನೀನಿಲ್ಲಿ ಶಕ್ತಿ
ನಿನ್ನಿಂದ ನಾನು ನನ್ನೊಳಗೆ ನೀನು,
ನೋವಿಗೆ ದನಿ ನೀನು
ನಲಿವಿಗೂ ಕಾರಣ ನೀನೇ...

ಆತ್ಮಸ್ಥೈರ್ಯವೂ ನೀನು
ನನ್ನೊಳಗೆ ಕನಸಾಗಿ,
ಕೈ ಹಿಡಿದು ನಡೆಸುವಾ
ಆತ್ಮ ಸಖನೂ ನೀನಲ್ಲವೇ...

ಜೀವನದ ದೋಣಿಗೆ ಅಂಬಿಗನು ನೀ
ತಪ್ಪು ಸರಿಗಳಿಗಿಲ್ಲಿ ನ್ಯಾಯಧೀಶ,
ಪರಮಾತ್ಮ ನೀನಿಲ್ಲಿ ನನ್ನೊಳಗೆ
ದೇಹವೆಂಬ ಗುಡಿಯೊಳು ಪೂಜೆಯಿಲ್ಲದೇ...

11 July, 2020

ಮಾಯೆ...

ಬದುಕಲಿ ಇದು ಸತ್ಯವೂ
ನಾಳೆಯೆಂಬುದು ಕನಸದೂ,
ನಾನು ನೋಡದ ನಾಳೆಯಾ
ಹೇಗೆ ನಂಬಲಿ ಕಾಲವೇ...

ಕನಸು ಎಂಬುದು ಸತ್ಯವೇ
ಮನಸು ಕೇಳಿದೆ ಪ್ರಶ್ನೆಯಾ,
ಇಂದು ಎಂಬುದು ನನ್ನದೇ
ಕಳೆದು ಹೋಗುತಿಹುದು ಕಾಲದೇ...

ಓ ಜೀವವೇ ನೀನು ಇಲ್ಲಿ ನಿತ್ಯವೇ
ಅಂತರಾತ್ಮ ಕೇಳಿದೆ ಮೆತ್ತಗೆ,
ಎಲ್ಲಿ ಹುಡುಕಲಿ ಉತ್ತರ
ಬದುಕು ಹೇಳು ನೀ ಸುಮ್ಮನೇ...

ಆತ್ಮ ನುಡಿದಿದೆ ಸತ್ಯವಾ
ಇಲ್ಲಿರುವೆ ನೀನು ಸುಮ್ಮನೇ,
ಇದು ನಾಲ್ಕು ದಿನಗಳ ಚಾರಣ
ಮುಗಿಸಬೇಕು ಸಂತೃಪ್ತಿಯಿಂದಲೇ...

ಕಾಲದ ಕೈ ಗೊಂಬೆಯೂ
ನಾಲ್ಕು ದಿನದ ಈ ಆಟವೂ,
ಆತ್ಮಕೇ ನೀನೊಂದು ಅಂಗಿಯೂ
ಬದಲಾಗುವುದು ಪ್ರತಿ ಪಯಣದೇ...