31 March, 2021

ಕನಸು...

ಒಲವಿನ ಹೂರಣ ನೀನು
ಬದುಕಿಗೆ ತೋರಣವೂ,
ಓ ಕನಸೇ ಬದುಕಲಿ ನೀನು
ಚಂದ್ರ ಚೆಲ್ಲಿದ ಬೆಳದಿಂಗಳು...

ಆಗಸಕೆ ಏಣಿಯ ಇಟ್ಟು
ಮನದೊಳಗೆ ಆಸೆಯನಿಟ್ಟೆ,
ಓ ಕನಸೇ ಮಾಯಾವಿ ನೀನು
ಭ್ರಮೆಯೊಳಗೆ ಸಿಲುಕಿಸಿಬಿಟ್ಟೆ...

ನೆನಪುಗಳ ಕೂಡಿಸಿ ಇಟ್ಟು
ಮನಸೊಳಗೆ ಕಚಗುಳಿ ಇಟ್ಟೆ,
ಕಾಣದ ಲೋಕಕೆ ಲಗ್ಗೆಯನಿಟ್ಟು
ಕಾಡುವ ಕಿನ್ನರ ನೀನಾದೆ...

ಜೊತೆಗಿರೆ ನೀನು ಬಾಳಲಿ
ಬದುಕಿಲ್ಲಿ ಪ್ರೇಮಲೋಕ,
ಕರಗಿ ಹೋದರೆ ಕನಸೇ ನೀನು
ಕತ್ತಲು ಇಲ್ಲಿ ಬಾಳಿನ ಯಾತ್ರೆ...

16 March, 2021

ಭರವಸೆ...

ಬದುಕು ನೀಲಿ ನೀಲಿ ಆಕಾಶ
ಹಾರುವ ಹಕ್ಕಿಯಿಲ್ಲಿ ಮನಸೀಗ,
ಕನಸುಗಳ ರೆಕ್ಕೆಯ ಬಿಚ್ಚುತ್ತಾ
ನಾಳೆಗಳ ಹುಡುಕಾಟ...

ಬದುಕು ಅನಂತ ಅವಕಾಶ
ನಿನ್ನೆಗಳ ನೆನಪ ಮರೆತಾಗ,
ನಗುವಿನ ಪುಟವ ತೆರೆದಾಗ
ನಾಳೆಗಳ ಪಯಣ ಸುಲಲಿತ...

ಬದುಕು ಸುಂದರ ಹೂದೋಟ
ನಿನ್ನೆಗಳ ಕಹಿಯ ಮರೆತಾಗ,
ನಗುವಿನ ತೋರಣ ಕಟ್ಟಿದರೆ
ನಲಿವಿನ ಹೂವುಗಳಲ್ಲಿ ಅರಳುವವು...

ಬದುಕು ಇಲ್ಲಿ ಸಾಗರವೂ
ಪರೀಕ್ಷೆಗಳ ಆಗರವೂ,
ಅರಿಯದೆ ಬರುವ ಪ್ರಶ್ನೆಗಳಿಗೆ
ತಾಳ್ಮೆಯ ಹೆಜ್ಜೆಗಳೇ ಉತ್ತರವೂ...