ಒಲವಲ್ಲೂ ಕೂಡ ನೋವಿಹುದು ಇಲ್ಲಿ
ಆ ನೋವು ಕೂಡ ಹಿತವಾಗಿಹುದಲ್ಲ,
ಬಾಳೆಂಬ ಬನದಿ ಒಲವೆಂಬ ಲತೆಯೊಳು
ಪ್ರೀತಿ ಹೂವಾಗಿ ಅರಳಿ ನಗುತಿರಲೂ...
ಕನಸೊಂದು ಇಲ್ಲಿ ಜೊತೆಯಾಗಿ ಇರಲೂ
ಮನಸೊಂದು ಮಗುವಂತೆಯೇ,
ಹಗಲಿಲ್ಲಿ ನಗಲು ಇರುಳ ಕನವರಿಕೆ
ಇರುಳ ತುಂಬೆಲ್ಲಾ ಕನಸುಗಳ ಬಾಯಾರಿಕೆ...
ಯಾರೆಲ್ಲೇ ಇರಲಿ ಊರೆಲ್ಲಾ ನಗಲಿ
ಮನಸೊಂದೇ ಕನವರಿಸಿದೇ,
ಒಲವ ಧ್ಯಾನದೊಳು ಈಗ
ಈ ಬದುಕಿಲ್ಲಿ ತಪಸ್ಸಾಗಿದೆ...
ನೂರು ನೋವುಗಳ ದಾಟಿ
ನಲಿವುಗಳ ತಂತಿಯ ಮೀಟಿ,
ಒಲವೆಂಬ ಚುಕ್ಕಿ ಮಿನುಗುತಿರಲು
ಮನಸಿಲ್ಲಿ ಅನಂತ ಆಕಾಶವು...