30 July, 2021

ಮೂರರೊಳಗೆ ಬಾಳು...

ಮೂರು ದಿನದ ಬಾಳು 
ತಪ್ಪದಿಲ್ಲಿ ಗೋಳು,
ಅವನು ಆಡಿಸುವ ಆಟದಂತೆ
ನಮ್ಮದಿಲ್ಲಿ ಬಾಳು...

ಮೂರು ದಿನದ ಪಯಣ
ನೂರು ಅವಘಡಗಳಲ್ಲಿ,
ಗಮ್ಯ ಸೇರುವ ಮುನ್ನ
ಹಲವಾರು ತಿರುವು ಇಲ್ಲಿ...

ಬದುಕು ಮೂರು ಸಾಲಿನ ಕವಿತೆ
ಸ್ನೇಹ ಪ್ರೀತಿ ಪ್ರೇಮದ ಜೊತೆಗೆ,
ಪ್ರಾಸ ಭಾಸವೆಲ್ಲಾ ಇಲ್ಲಿ
ಭಾವಗಳ ಮಿಲನದ ಜೊತೆಗೆ...

ಬದುಕು ಮೂರು ದಿನದ ಸಂತೆ 
ಇಲ್ಲಿಹುದು ಚಿಂತೆಗಳ ಕಂತೆ,
ಹೊತ್ತು ಸಾಗಬೇಕು ಇಲ್ಲಾ ಬಿಟ್ಟು ಹೋಗಬೇಕು
ಜಗದ ಋಣವು ಮುಗಿಯೋ ಮುಂಚೆ...

17 July, 2021

ಬೃಂದಾವನ...

ಒಂದು ಸಣ್ಣ ನೆನಪು ಸಾಕು
ಮತ್ತೆ ಮತ್ತೆ ನಿನ್ನ ಪ್ರೀತಿ ಮಾಡಲೂ,
ಒಂದೇ ಒಂದು ಮಾತು ಸಾಕು
ಒಲವ ಆಗಸಕೆ ಹಾರಲೂ...

ನಿನ್ನದೊಂದು ಮೌನ ಸಾಕು
ಹೃದಯ ಕರಗಿ ಕಣ್ಣೀರಾಗಲೂ,
ನಿನ್ನದೊಂದು ನಗುವು ಬೇಕು
ನನ್ನ ಮನವು ಹಗುರಾಗಲೂ...

ನಿನ್ನೊಳು ಹುಸಿ ಕೋಪವಿರಬೇಕು
ನಾನು ಇಲ್ಲಿ ಮಗುವಾಗಲೂ,
ನಿನ್ನ ತುಂಟತನವೂ ಬೇಕು
ನಾನು ಪ್ರೇಮಿಯಾಗಿ ಬೆರೆಯಲು...

ನೀನು ಸದಾ ನಗುತಲಿರಬೇಕು
ಬದುಕು ಬೃಂದಾವನವಾಗಲೂ,
ನೀನು ರಾಧೆಯಾಗಿರಲು ಇಲ್ಲಿ
ನಾನು ನಿನ್ನೊಲವಿಗೆ ಮಾಧವ...