30 September, 2022

ಕಾಣದಾ ಕಡಲಿಗೆ...

ನಿದಿರೆಯಾ ಒಳಗೊಂದು ಕನಸು ಇದೆ
ಆ ಕನಸೊಳಗೆ ನೂರು ಆಸೆಯಿದೆ,
ಪ್ರತಿ ಕನಸು ಇಲ್ಲಿ ಹಿತವಾಗಿರೆ
ಕೆಲವೊಂದು ಮಾತ್ರ ಬಹು ಕಾಡಿವೆ...

ನಿದಿರೆಯಾ ಹೊರಗೂ ಕನಸೊಂದಿದೆ
ಆ ಕನಸೊಳಗೆ ಬದುಕು ನಸುನಗುತಿದೆ,
ನಾಳೆಗಳ ಭರವಸೆಯೂ ಅದರಲ್ಲಿದೆ
ಒಳಗೊಳಗೆ ಸ್ವಲ್ಪ ಅಳುಕಿಲ್ಲಿದೆ...

ನಿದಿರೆಯಾ ಕನಸಿಲ್ಲಿ ಮೈಮರೆಸಿದೆ
ಬದುಕಿನಾ ಕನಸಿಲ್ಲಿ ಮೈಮುರಿಸಿದೆ,
ಪ್ರೀತಿಯಾ ಹಾಡಲ್ಲಿ ಕನಸಲ್ಲಿದೆ
ವಾಸ್ತವದ ಗೋಳಿಲ್ಲಿ ಬದುಕಾಗಿದೆ...

ಬದುಕು ಕಪ್ಪು ಬಿಳುಪಿನಾ ಬಣ್ಣದಾಟವೂ
ಕಣ್ಮುಚ್ಚಿ ತೆರೆಯುವಾಗ ಕನಸಿನಾಟವೂ...
ನೂರು ನೆನಪುಗಳ ತೊಳಲಾಟವೂ
ಕಾಣದಾ ಕಡಲೊಳು ಮನಸಿನ ಓಟವೂ...

21 September, 2022

ಮರೆವಿನ ಮರೆಯೊಳು...

ಮರೆಯೋದು ಕೂಡ ವರವಂತೆ ಇಲ್ಲಿ
ಆಸೆಗಳ ಮರೆತು ಬದುಕನ್ನು ನೋಡು,
ಮರೆವಿನ ಮರೆಯಲ್ಲೇ ಬದುಕು ಅರಳುವುದು
ಮರೆವಿನ ನೆರಳಲ್ಲೇ ಕನಸದು ಚಿಗುರುವುದು...

ಬದುಕಲಿ ಕೋಪವ ಮರೆತಾಗ 
ಮನದೊಳು ಪ್ರೀತಿಯು ಅರಳುವುದು,
ಜಗದೊಳು ದ್ವೇಷವು ಮರೆತಾಗ 
ಸಂಬಂಧಗಳು ನಗುತಾವು...

ಮನಸು ಕೊರಗುವುದ ಮರೆತಾಗ
ನಮ್ಮಯ ನಾಳೆಗಳು ನಗುತಾವ,
ಮನುಜ ಇಲ್ಲಿ ಚಿಂತೆಯ ಮರೆತಾಗ
ಹೃದಯವು ಖುಷಿಯಲಿ ಮೀಯುವುದು...

ಬದುಕಲಿ ನೋವನು ಮರೆತಾಗ
ನಾಳಿನ ದಾರಿಯು ಕಾಣುವುದು,
ನಿನ್ನೆಗಳ ಕತ್ತಲೆಯಾ ಮರೆತಾಗ
ಭರವಸೆಯ ಸೂರ್ಯನು ಉದಯಿಸುವಾ...