30 April, 2023

ಬೆಳದಿಂಗಳು...

ಮನಸೆಂಬ ಆಗಸ ತುಂಬಾ
ಕನಸೆಂಬ ಬಿಳಿ ಮೋಡಗಳು,
ಬದುಕಿನ ತೋಟದ ತುಂಬಾ
ನಿರೀಕ್ಷೆಯಾ ಹೊಸ ಮೊಗ್ಗುಗಳು...

ಕಾಯಲೇಬೇಕು ಕಾಲಕ್ಕಿಲ್ಲಿ
ಕನಸುಗಳ ಮೋಡ ತಂಪಾಗಲು,
ತಾಳ್ಮೆಯ ತಪಸ್ಸಿರಬೇಕು 
ಬದುಕಿಲ್ಲಿ ಹಸನಾಗಲು...

ನೂರಾರು ಜಂಜಡವಿದ್ದರೂ
ಬದುಕಿಲ್ಲಿ ನಗಬೇಕು,
ಖುಷಿಯಿಲ್ಲಿ ಕುಣಿಯಬೇಕು
ನಗುವಿನ ಹೂವು ಅರಳಲು...

ಭರವಸೆಯ ಬೆಳದಿಂಗಳಲಿ 
ಬೆಳಗಬೇಕು ಮನಸ್ಸಿಲ್ಲಿ,
ಬದುಕೆಂಬ ಹೊಲದಾ ತುಂಬಾ
ಅರಳಬೇಕು ಪ್ರೀತಿಯ ಹೂವುಗಳು...

25 April, 2023

ಬದುಕೇ ಚೆಂದವೂ...

ಮುನಿಸು ಮರೆತರೆ ಮನಸು ಚೆಂದವೋ 
ಮೌನ ಅರಿತರೆ ಹೃದಯ ಚೆಂದವೋ,
ಭಾವದೊಳಗಿನ ಮೊರೆತ ಅಂದವೋ 
ಬದುಕ ಕಾಡುವ ಕನಸು ಚಂದವೋ...

ಪ್ರೀತಿ ಬೆರೆತರೆ ಸ್ನೇಹ ಚೆಂದವೋ 
ತ್ಯಾಗ ಮೆರೆದರೆ ಪ್ರೀತಿ ಅಂದವೋ,
ಮನಸ ಬೆಸೆಯುವಾ ಬಂಧ ಚೆಂದವೋ 
ಸಂಬಂಧಗಳ ಸರಿಗಮದಿ ಬದುಕೇ ಆನಂದ...
 
ಆಸೆ ಮರೆತರೆ ಬದುಕಿಗೆ ಆನಂದ
ನೋವು ಮರೆತರೆ ಮನಸಿಗಾನಂದ,
ನಗುವು ಬೆರೆತರೆ ನಾಳೆಗೆ ಆನಂದ
ಕಹಿಯ ಮರೆತರೆ ಬದುಕು ಪರಮಾನಂದ...

ಭರವಸೆಯ ನೆರಳು ಅಂದವೋ
ನಾಳೆಗಳ ಕನಸು ಚಂದವೋ,
ಒಲವ ಜೋಕಾಲಿಯೊಳಗೆ
ಮನಸು ಜೀಕುವಾಗ ಬದುಕಿಗಾನಂದವೋ...