ಹೃದಯದ ಬಾಗಿಲ ಸಂಧಿಯಲಿ
ಇಣುಕಿದೆ ಪ್ರೀತಿಯ ನಕ್ಷತ್ರ,
ಕನಸಿನ ಊರಿನ ತೋಟದಲಿ
ಮಿನುಗಿದೆ ಆಸೆಯ ಮೊಗ್ಗಾಗಿ...
ತೋರಣ ಕಟ್ಟಿದೆ ಮನಸಿಲ್ಲಿ
ಅರಳುವ ನಾಳೆಯ ಆಶಯಕೆ,
ಮರುಳಾಗಿದೆ ಬದುಕು ಬಯಕೆಯಲಿ
ಬಯಸಿ ಬರಬಹುದೇ ಕನಸಿಲ್ಲಿ...
ಕಾರಣವಿಹುದಿಲ್ಲಿ ಬದುಕಿನ ಕರ್ಮಕ್ಕೆ
ಕಾಯಬಹುದೇ ಬದುಕಿನ ದಾರಿಯಲಿ,
ಕಾರಣವಿಲ್ಲದೇ ಹುಟ್ಟಿದ ಪ್ರೀತಿಗೆ
ಕರ್ಮದ ಬಂಧನವಿಹುದೇ ಬದುಕಲ್ಲಿ...
ಬಾನನು ಚುಂಬಿಸೋ ತವಕದಲಿ
ಮೈಮರೆತಿದೆ ಮನಸು ಪುಳಕದಲಿ,
ಕನಸಿನ ಊರಿನ ಪಯಣದಲಿ
ಒಲವಿನ ಗೀತೆಯ ಗುನುಗುತಲಿ...