30 October, 2024

ದೀಪಾವಳಿ...

ಹಚ್ಚುವೆನು ನಾನೊಂದು ಹಣತೆ 
ಬೆಳಗಬೇಕಿಲ್ಲಿ ಓ ಬೆಳಕೇ,
ಮನದ ಅಂಗಳವ ತುಂಬಿ 
ನಾಳೆಗಳು ನಗುವಂತೆ...

ಬೆಳಗಬೇಕಿಲ್ಲಿ ಭರವಸೆಯ ಜ್ಯೋತಿ 
ಕನಸುಗಳು ನಲಿದಾವು ನೋಡಿ,
ಉರಿಯಬೇಕಿಲ್ಲಿ ನೀ ದೀಪವಾಗಿ 
ಮನದ ಅಂಗಳದ ಜ್ಞಾನ ದೀವಿಗೆಯಾಗಿ...

ಪ್ರೀತಿಯಿಂದಲಿ ಹಚ್ಚುವೆನು ನಿನ್ನಾ 
ಪ್ರೀತಿಯ ಹಂಚಬೇಕಿಲ್ಲಿ ಬೆಳಗೇ,
ಮಾನ ಅವಮಾನಗಳ ಪರದೆ ಸರಿಸಿ 
ಬೆಳಗಬೇಕಿಲ್ಲಿ ನೀ ಬದುಕಾ...

ಹಚ್ಚುವ ದೀಪವಿದು ಬರಿಯ ದೀಪವಲ್ಲ 
ಹತ್ತಾರು ಕನಸುಗಳ ಒಂದು ಮಿಂಚು,
ಕಾಲ ಸರಿದು ಹರಿಯಲಿ ದೂರ ದೂರ 
ಬೆಳಗುತಿರಲಿ ಬದುಕು ಬೆರಗಿನಿಂದ....

21 October, 2024

ಮನಸೆಂಬ ಮಾಯಾವಿ...

ಮನಸೇ ನೀನಿಲ್ಲಿ ಭರವಸೆಯೂ
ಕನಸುಗಳು ಕಮರಿದರೂ,
ಆಸೆಗಳ ಚಿಗುರಿಸಿ ನೀ 
ನೀರೆರೆವಾ ಭಾವಸಾಗರವೇ...

ಮನಸೇ ನೀನೊಂದು ಬೆಳಕಿಲ್ಲಿ 
ಕಷ್ಟಗಳ ಕಾರ್ಮೋಡ ಕವಿದರೂ,
ನಗುವಿನಾ ಚಪ್ಪರ ಹಾಸಿ 
ನಲಿವಿನ ದೀಪವ ಬೆಳಗಿಸುವೆ...

ಮನಸೇ ನೀನಿಲ್ಲಿ ತಂಗಾಳಿ 
ಮೈಸವರಿ ಮುದ್ದಾಡೋ ಮಾಯಾವಿ,
ಒಂದೊಮ್ಮೆ ಸುಂಟರಗಾಳಿ 
ಕಾಲದ ಹರಿವಿನೊಳು...

ಬದಕೇ ನೀನಿಲ್ಲಿ ಜಟಕಾಬಂಡಿ 
ಹೊರುವೆ ಎಲ್ಲಾ ಭಾರಗಳ,
ಮನಸೇ ನೀನೊಬ್ಬ ಮಾಯಾವಿ 
ಮೆರೆವೆ ಎಲ್ಲಾ ಭಾವಗಳ...