ಬಣ್ಣ ಬಣ್ಣದಾ ಮುಖವಾಡ
ಬದುಕಿನಾ ಪ್ರತಿ ಮಜಲೊಳಗೆ ,
ನೆನಪುಗಳ ಜೊತೆಗೆ ಗುದ್ದಾಟ
ಕನಸುಗಳ ಮೆರವಣಿಗೆಯೊಳಗೆ ...
ಆಸೆಗಳ ಜೊತೆಗೆ ತಿಕ್ಕಾಟ
ಬದುಕಿನ ಪಯಣದ ಕೊನೆವರೆಗೂ,
ನಿರೀಕ್ಷೆಗಳ ಜೊತೆಗಿನ ಹೊಡೆದಾಟ
ನಿರಾಸೆಯ ಜೊತೆಗೆ ಕೊನೆಗೆ ನಿರ್ಲಿಪ್ತ...
ಜಗದೊಳು ಸಂಬಂಧಗಳ ತಕಧಿಮಿತಾ
ಮನಸಲಿ ಭಾವಗಳ ಹೊಯ್ದಾಟ,
ನೆಮ್ಮದಿಯ ಹುಡುಕಾಟದಲಿ
ನೂರಾರು ಬಗೆಯ ಹೋರಾಟ...
ವಿಳಾಸವ ಮರೆಯದ ಕರ್ಮಕ್ಕೆ
ಹೆದರದೆ ನಡೆದಿದೆ ಹೋರಾಟ,
ಕರಗಿ ಹೋಗಿದೆ ಕಾಲವು ಕೂಡ
ಬದುಕುವ ಛಲದೊಳಗಿನ ಆಟಕ್ಕೆ...