29 June, 2018

ಸಂತೆ...

ಚಿಂತೆಯಾ ಸಂತೆಯಲ್ಲಿ
ನಾನು ಒಬ್ಬ ಭಿಕಾರಿ,
ಕನವರಿಸೋ ಕನಸುಗಳು ಕೂಡ
ಇಲ್ಲಿ ಕೈಗೆಟುಕದಷ್ಟು ದುಬಾರಿ...

ಮನಸ್ಸಾಗಿದೆಯಿಲ್ಲಿ ಮಾರುಕಟ್ಟೆ
ನಡೆದಿದೆ ಭಾವನೆಗಳ ವ್ಯಾಪಾರ,
ಬಿಕರಿಯಾಗಿವೆ ಸಂಬಂಧಗಳು
ಜೋರಾಗಿದೆ ಸ್ವಾರ್ಥದ ವ್ಯಾಪಾರ...

ಬದುಕಿನಾ ದಾರಿಯ ತುಂಬಾ
ಬರೀಯ ಬಿರುಗಾಳಿ,
ನಾಳೆಯ ನೋಡಲು ಹೋದರೆ
ಕಣ್ಣಿನ ತುಂಬಾ ಬರೀ ಧೂಳುರೀ...

ಮನಸಿನ ತುಂಬಾ ಇಲ್ಲಿ
ಮಾಗದ ಗಾಯನೇ,
ಮೂಗು ಮುಚ್ಚಿದರೂ ಕೂಡ
ನಿಲ್ಲುತ್ತಿಲ್ಲ ಕಮಟು ವಾಸನೆ...

ಉರಿದು ಹೋಗುತಿದೆಯಿಲ್ಲಿ
ಬದುಕಿನಾ ಮೋಹ,
ಅಡಿಗಡಿಗೆ ಗೋಚರಿಸಿದೆ
ಕಾಲನ ಪಾಷ...








12 June, 2018

ತವಕ...

ಮೂರು ದಿನದ ಬದುಕೂ
ಇಲ್ಲಿ ನೂರು ಖುಷಿಯ ತವಕ,
ಕಣ್ಣರೆಪ್ಪೆ ಮುಚ್ಚಿ ತೆರೆಯೋ ಮುಂಚೆ
ಕನಸ ಮುಗಿಸೋ ತವಕ...

ಜಗದ ಕತ್ತಲು ಕಳೆಯೋ ಮುಂಚೆ
ಬೆಳಕ ಕಾಣೋ ತವಕ,
ಮಿಂಚು ಹುಳದ ಬೆಳಕಿನಲ್ಲೂ
ಲೋಕ ಸುತ್ತುವ ತವಕ...

ಒಂಟಿ ಪಯಣದಲ್ಲೂ
ಜಂಟಿ ಕನಸ ಕಾಣೋ ತವಕ,
ಕತ್ತಲು ಕವಿದ ಬದುಕಿನಲ್ಲೂ
ಬೆಳದಿಂಗಳ ಹುಡುಕೋ ತವಕ...

ಸೂರ್ಯ ಕಿರಣದೊಳಗೂ
ಚಂದ್ರ ಬಿಂಬ ಕಾಣೋ ತವಕ,
ಭಾವ ಮುದುಡಿದ ಮನಸಿನಲ್ಲೂ
ಪ್ರೀತಿ ಬೆಳೆಸೋ ತವಕ...

09 June, 2018

ಮನ್ವಂತರ...

ಎದೆಯ ತುಂಬೆಲ್ಲಾ ನೆನಪುಗಳ ಹಾವಳಿ
ಮನಸಿನಾ ತುಂಬಾ ಕನಸುಗಳಾ ಹಾವಳಿ,
ರಜೆ ಹಾಕಿದ ಕನಸುಗಳು ಮತ್ತೆ ಹಾಕಿವೆ ಹಾಜರಿ...

ಬದುಕಿನಾ ಪುಟದೊಳಗೆ ಭಾವನೆಗಳ ಹಾಜರಿ
ಬರೆದಿದೆ ಮನಸೊಳಗೆ ನಲಿವಿನಾ ಚಿತ್ತಾರ,
ಚಿಂತೆಯೆಂಬ ಚಿತೆಯಿಲ್ಲಿ ಹಾಕಿದೆ ಗೈರು ಹಾಜರಿ...

ಮರಳಿದೆ ಮಂದಹಾಸ ಮನಸಿನಾ ಅಂಗಳಕೆ
ನಗುವಿನಾ ಪಯಣ ಈಗ ಬದುಕಿನಾ ನಂದನದೀ,
ಬದುಕೀಗ ತುಂಟಾಟ ತುಟಿಯಂಚಿನ ನಗುವಲ್ಲೇ...

ಕನಸುಗಳಿಗೆ ಶುರುವೀಗ ವಸಂತ ಕಾಲ
ನೋವು ನಲಿವುಗಳು ನೆಪವಷ್ಟೆ ನೆನಪೀಗೆ,
ಕನಸುಗಳ ಜೊತೆಯಿರಲು ಬದುಕಿಲ್ಲಿ ಚೈತ್ರ ಕಾಲ...