30 December, 2023

ಜಗದ ಜಗಲಿಯೊಳು...

ಮಣ್ಣಾಗೋ ಜೀವಕ್ಕೂ ಚಿಂತೆಯಿಲ್ಲಿ
ಓಡೋ ಕಾಲದ ಜೊತೆಗೆ ಸಂತೆಯಿಲ್ಲಿ,
ನಿನ್ನೆ ಮೊನ್ನೆಗಳ ಗಂಟಿನೊಳಗೂ
ಬದುಕನ್ನು ನಗಿಸುವಾ ನಂಟು ಇಲ್ಲಿ...

ಇರೋದು ಒಂದೇ ಬದುಕು
ಇರುವುದರಲ್ಲೇ ಬದುಕಬೇಕು ಇಲ್ಲಿ,
ಅನುಮಾನಗಳ ಸರಿಸುತ್ತಾ
ಅನುಭವಗಳ ಪಡೆಯಬೇಕಿಲ್ಲಿ...

ಸವೆಸಬೇಕು ಬದುಕು ಕಾಲದ ಜೊತೆಗೆ
ಗಮ್ಯ ಸೇರುವಂತೆ ನದಿಯೂ,
ಸವೆಯಬೇಕು ಕಾಲು ದೇಹದ ಜೊತೆಗೆ
ಕರ್ಮಗಳ ಕಳೆಯುವವರೆಗೆ...

ಹರಿಯಬೇಕು ಜಗದ ಹರಿವಿನೊಳು
ಮರೆಯಬೇಕು ಮನದ ಮಲಿನಗಳ,
ಬೆರೆಯಬೇಕು ಮನದ ಮಜಲಿನೊಳು
ಮಾಗಬೇಕು ಬದುಕು ಜಗದ ಜಗಲಿಯೊಳು...

No comments:

Post a Comment