30 March, 2024

ಕಥೆ...

ನೂರಾರು ಕಥೆಗಳ ನಡುವೆ
ಕವಿತೆಯಾಗಿ ಉಳಿಯುವೆ ನಾ,
ನೀನೇಷ್ಟು ಓದಿದರೂ
ಯಾರೆಷ್ಟು ಕಿವಿ ಊದಿದರೂ...

ಕಥೆಗಳ ಹಂಗಿಲ್ಲ ನನಗೆ
ಆತ್ಮಸಾಕ್ಷಿಯ ನೆರಳಿರಲು,
ಕವಿತೆಯೊಳಗೆ ನಾನು ಬಂಧಿ
ಭಾವ ತಳೆದು ಪ್ರೇಮಿಯಾಗಿ...

ಕಥೆಯೊಳಗೆ ನನ್ನ ಬಂಧಿಸಲಾರೆ 
ಕೇಳು ಓ ಮೂಢ ಮನವೇ,
ಬಣ್ಣವಿಲ್ಲ ಮುಖವಾಡವಿಲ್ಲ
ಪ್ರೀತಿಯೊಂದೇ ಕನವರಿಕೆ ಇಲ್ಲಿ...

ಮೌನಿ ನಾನು ಮಾತಾಗಲಾರೆ
ಹಠದ ಮುಂದೆ ಬಾಗಲಾರೆ,
ನೀನೆಷ್ಟು ಕಥೆಗಳ ಬರೆದಿಟ್ಟರೂ
ಅವ ಬರೆದ ಕಥೆಯೇ ನಿತ್ಯ ಸತ್ಯವೂ...

17 March, 2024

ಅಂತರ್ಮುಖಿ...

ಭರವಸೆಯ ನಾಳೆಗಳಿಗೆ
ಮನಸೀಗ ಅಣಿಯಾಗಬೇಕಿಲ್ಲಿ,
ಮರೆತು ಹೋದ ಮನಸುಗಳ
ಮರೆತು ಮುಂದೆ ಸಾಗಬೇಕಿಲ್ಲಿ...

ಯಾರೋ ಬಿಟ್ಟ ನೆನಪುಗಳು
ಬದುಕಲಾರವು ಬಹಳ ದಿನ,
ಮರೆಯೋದು ವರವಿಲ್ಲಿ 
ಮೂರು ದಿನದ ಬದುಕಿನೊಳು...

ನಗುವಿರದ ಮುಖವಿಲ್ಲ
ನೋವಿರದ ಬಾಳಿಲ್ಲಾ,
ಸವೆದು ಹೋದ ದಾರಿಯಲೇ 
ನಡೆಯೋದು ಬದುಕಿಲ್ಲಿ...

ನೆರಳೇ ಇಲ್ಲಿ ಕರಗುವುದು
ಕತ್ತಲೆಯ ಛಾಯೆಯಲಿ,
ಸಂಬಂಧಗಳು ಮರೆಯಾಗುವವು
ಕಾಲಚಕ್ರದ ಸುಳಿಯೊಳಗೆ...

10 March, 2024

ಖಾಲಿ ಹಾಳೆಯಾ ತುಂಬಾ...

ಖಾಲಿ ಖಾಲಿ ಮನಸೆಲ್ಲಾ
ಖಾಲಿ ಖಾಲಿ ಕನಸೆಲ್ಲಾ,
ಬದುಕು ಸಾಗುವ ದಾರಿಯಲಿ
ಬರೀ ಮಂಜು ಮಂಜು ಬಯಲಿಲ್ಲಿ...

ಸೋತು ಹೋದ ಮನಸಿಲ್ಲಿ
ಕನಸೇ ಕಾಣದ ಬದುಕಿಲ್ಲಿ,
ನೂರು ನೋವ ತುಂಬುತಲಿ
ನೆನಪೇ ಮಾಯ ಮನದಲ್ಲಿ...

ಹರಸೋ ಮನಸು ಮೌನದಲಿ
ಶಪಿಸೋ ಕಾಲ ಬದುಕಿನಲಿ,
ವರವೂ ಇಲ್ಲ ಬದುಕಿನಲಿ
ಮಾಯೆಯ ಛಾಯೆ ಮನಸಿನಲಿ...

ಪ್ರೀತಿ ಮರೆತ ಮನಸಿನೊಳು
ಭಾವಗಳೆಲ್ಲಾ ಸೊರಗುತಿವೆ,
ತೃಪ್ತಿಯ ಹುಡುಕುವ ಬದುಕಿನೊಳು
ಅತೃಪ್ತಿಯೇ ತುಂಬಿದ ಮನಸು ಇದೆ...