ನೂರಾರು ಕಥೆಗಳ ನಡುವೆ
ಕವಿತೆಯಾಗಿ ಉಳಿಯುವೆ ನಾ,
ನೀನೇಷ್ಟು ಓದಿದರೂ
ಯಾರೆಷ್ಟು ಕಿವಿ ಊದಿದರೂ...
ಕಥೆಗಳ ಹಂಗಿಲ್ಲ ನನಗೆ
ಆತ್ಮಸಾಕ್ಷಿಯ ನೆರಳಿರಲು,
ಕವಿತೆಯೊಳಗೆ ನಾನು ಬಂಧಿ
ಭಾವ ತಳೆದು ಪ್ರೇಮಿಯಾಗಿ...
ಕಥೆಯೊಳಗೆ ನನ್ನ ಬಂಧಿಸಲಾರೆ
ಕೇಳು ಓ ಮೂಢ ಮನವೇ,
ಬಣ್ಣವಿಲ್ಲ ಮುಖವಾಡವಿಲ್ಲ
ಪ್ರೀತಿಯೊಂದೇ ಕನವರಿಕೆ ಇಲ್ಲಿ...
ಮೌನಿ ನಾನು ಮಾತಾಗಲಾರೆ
ಹಠದ ಮುಂದೆ ಬಾಗಲಾರೆ,
ನೀನೆಷ್ಟು ಕಥೆಗಳ ಬರೆದಿಟ್ಟರೂ
ಅವ ಬರೆದ ಕಥೆಯೇ ನಿತ್ಯ ಸತ್ಯವೂ...
No comments:
Post a Comment