ನಗುವಿನ ಮೊಗ್ಗಾಗಿ ಅರಳಬೇಕು
ಲೋಕದಾ ನಿಂದೆಯೊಳು ಮಿಂದೇಳಬೇಕು,
ಕರ್ಮದಾ ಬಲೆಯೊಳಗೆ ಒದ್ದಾಡಬೇಕು
ಬದುಕೇ ನೀನಿಲ್ಲಿ ಮುಗ್ಧ ಮಗುವಾಗಬೇಕು...
ಒಲವೇ ನೀನಿಲ್ಲಿ ಕಂಪ ಸೂಸಬೇಕು
ಸರಸಕ್ಕೂ ವಿರಸಕ್ಕೂ ಸಮರಸವಾಗಿ,
ನಗುವಾ ಮನಸಿನ ಗೆಲುವಾಗಿ
ಬದುಕೇ ನೀನಿಲ್ಲಿ ಬಂಧುವಾಗಬೇಕು...
ನೆನಪುಗಳ ಗಂಟನ್ನು ತೆರೆಯಬೇಕು
ಸವೆದ ಹಾದಿಯ ಒಮ್ಮೆ ನೋಡಬೇಕು,
ಕನಸುಗಳ ಹೆಜ್ಜೆ ಗುರುತನ್ನು ಹುಡುಕಬೇಕು
ಬದುಕೇ ಒಂದೊಮ್ಮೆ ನೀನು ಮೌನಿಯಾಗಬೇಕು...
ಮನಸೇ ನೀನಿಲ್ಲಿ ಅಕ್ಷಯವಾಗಬೇಕು
ಮುರಿದ ರೆಕ್ಕೆಗಳ ಕಟ್ಟಿ ನಿಲ್ಲಬೇಕು,
ಹರಿದ ಕನಸುಗಳ ಮತ್ತೆ ಜೋಡಿಸಬೇಕು
ಬದುಕೇ ನೀನಿಲ್ಲಿ ನಿತ್ಯ ನೂತನವಾಗಬೇಕು...
No comments:
Post a Comment