27 May, 2024

ಸಂಘರ್ಷ...

ಕಾಡುವಾ ಬದುಕ ಬನದಿ ನೂರು ಸುಳ್ಳಿದೆ
ಕಳೆದುಕೊಳ್ಳುವಾ ಭಯವು ಮಾತ್ರ ಸತ್ಯವಾಗಿದೆ,
ಬದುಕು ಇಲ್ಲಿ ಸತ್ಯ ಸುಳ್ಳಿನ ತಂತಿ ಮೇಲಿದೆ
ಆ ತಂತಿಯಾ ಮೀಟಲೂ ಜೀವ ಹೆದರಿದೆ...

ಧರ್ಮದ ಮಡಿಲಿನಲ್ಲಿ ಸತ್ಯ ಮಲಗಿರೆ
ಅಧರ್ಮದ ಹೆಗಲ ಮೇಲೆ ಸುಳ್ಳು ಮೆರೆದಿದೆ,
ಲೋಕವೂ ಸತ್ಯಕೆ ಪರೀಕ್ಷೆಯೊಡ್ಡಲೂ
ಸುಳ್ಳು ತಾನು ನಗುತಾ ಯಾತ್ರೆ ಮಾಡಿದೆ...

ಬದುಕಿನೊಳಗೆ ಸತ್ಯದಾ ಜಾತ್ರೆ ನಡೆಯದು
ಸತ್ಯದಾ ಭಾರವನ್ನು ಹೊರದು ಲೋಕವೆಂದಿಗೂ,
ಸುಳ್ಳಿಗೆ ಎಂದೂ ಇಲ್ಲಿ ಪೂಜೆ ಸಿಗುವುದೂ
ಜಗವೂ ಎಂದೂ ಬಣ್ಣದ ಮುಖವಾಡ ನಂಬೋದು...

ನೂರು ಬಾರಿ ಸೋತರೂ ಜಗದ ಜಗಲಿಯಲಿ
ಸತ್ಯವೆಂದಿಗೂ ತಲೆ ಎತ್ತಿ ನಿಲುವುದೂ,
ನೂರು ಬಾರಿ ಗೆದ್ದರೂ ಸುಳ್ಳು ಜಗದಲಿ
ತಲೆ ಬಾಗಿಸಿ ನಡೆಯಬೇಕು ಕಾಲದೊಂದಿಗೆ...

23 May, 2024

ದೀಪವೂ ನಿನ್ನದೇ...

ಬದುಕಿಲ್ಲಿ ಒಲವಿನಾ ದೀಪದಂತೆ
ಬೆಳಗಬೇಕಿಲ್ಲಿ ಊರ ಸಂತೆ,
ಕತ್ತಲೆಯ ಕಳೆಯಬೇಕು ಇಲ್ಲಿ
ಮನಸಿನ ಅಂಗಳವ ಬೆಳಗಬೇಕು...

ಮೂರು ದಿನದ ದೀಪವಂತೆ
ವಿಧಿಯೆಂಬ ಗಾಳಿಯ ಜೊತೆಗೆ,
ಕರ್ಮವೇ ಎಣ್ಣೆಯೆಲ್ಲಿ
ಸುಡದಾ ಬೆಂಕಿಯಾ ಮಾಯೆಯಲ್ಲಿ...

ದೀಪದಾ ಕೆಳಗಿಲ್ಲಿ ನೆರಳಂತೆ
ಕಾಲದ ಕಾರ್ಮೋಡ ಕವಿದಂತೆ,
ಕಷ್ಟ ಸುಖಗಳ ಪಾಡು ಮೋಡದಂತೆ
ಭರವಸೆಯೇ ಬೆಳಕಿನಾ ರಕ್ಷೆಯಂತೆ...

ಸಂವತ್ಸರಗಳ ಕಾಲ ಬೆಳಗಬೇಕು
ಬದುಕಿನಾ ದೀಪವೂ ಆರದಂತೆ,
ಕೋಟಿ ಕನಸುಗಳ ಹಾದಿಯಲ್ಲಿ
ಚಿತ್ತಾರ ಬರೆಯಲಿ ಮನಸು ಇಲ್ಲಿ...

18 May, 2024

ಪಯಣಿಗ....

ನೆನಪುಗಳ ಮರೆಯಲಿ 
ಕನಸೊಂದು ಅರಳಲಿ,
ಒಲವೆಂಬ ಚೆಲುವೆ
ಬದುಕನ್ನು ತುಂಬಲಿ...

ಕಾಲದ ಮರೆಯಲಿ
ಬದುಕಿಲ್ಲಿ ಮೆರೆಯಲಿ,
ನೋವು ನಲಿವಿನ ಜೋಕಾಲಿಯಲಿ
ಮನಸು ಸದಾ ಜೀಕುತಲಿ...

ಕಾರ್ಮೋಡ ಕವಿಯಲಿ
ನೂರು ಆಸೆಗಳ ಹೊತ್ತು,
ಮಳೆಯಾಗಿ ಸುರಿಯಲಿ
ಬತ್ತಿದೆದೆಯಾ ತುಂಬಲು...

ಮೌನವಿಲ್ಲಿ ಮಾತಾಗಲಿ
ಎದೆಯ ತುಂಬುತಾ ಭಾವವೂ,
ನಗುವು ಅಕ್ಷಯವಾಗಲಿ
ಮೂರುದಿನದ ಪಯಣದಲಿ...