27 September, 2012

ಪ್ರೀತಿಯ ಮಳೆಯಾಗು...


ಮಳೆಯಾಗಿ ನೀನು ಬರಬಾರದೇನು,
ಒಲವಾಗಿ ಈ ಮನವ ತಣಿಸಬಾರದೇನು,

ಭಾವನೆಯ ಜೊತೆಯಾಗಿ ಮಿಡಿಯುವೆನು ನಾನು.

ತಂಗಾಳಿಯಾಗಿ ನೀ ಸುಳಿಯಲಾರೆಯೇನು,
ಈ ಮನಕೆ ಮುದವ ನೀ ನೀಡಬಾರದೇನು,
ಮನಸಾಗಿ ಜೊತೆಗೆ ಸಾಗುವೆನು ನಾನು.

ಬೆಳದಿಂಗಳಾಗಿ ನೀ ಸುರಿಯಬಾರದೇನು,
ಹಿತವಾಗಿ ಈ ಮೈಯ ಬಳಸಬಾರದೇನು,
ಮುದ್ದಾದ ಕನಸೊಂದ ಬೆಸೆಯುವೆನು ನಾನು.

ಈ ಪ್ರೀತಿಯ ಗುಡಿಗೆ ದೈವ ನೀನಾಗಬಾರದೇನು,
ಒಲವಾಗಿ ನನ್ನ ಬಾಳ ನೀಬೆಳಗಲಾರಯೇನು,
ಬದುಕಿನ ಜೊತೆಗೆ ಉಸಿರಾಗುವೆನು ನಾನು.

13 September, 2012

ಕಟ್ಟಬೇಕಿದೆ ಬದುಕು...



ನೂರು ನಿರೀಕ್ಷೆಗಳ ದಾರಿಯಲಿ ಸಾಗಿದೆ ಜೀವನ,
ಅನುರತವು ನಡೆದಿದೆ ಕನಸುಗಳ ಸಮ್ಮೇಳನ,
ನೂರು ಏಟಿನ ಕಹಿನೆನಪುಗಳ ಜೊತೆಗೆ,

ಮಾಡಿದೆ ಮನಸನು ಹೊಸಕ್ರಾಂತಿಗೆ ಪ್ರೇರಣೆ.

ಯಾವುದೋ ಸ್ವಾಭಿಮಾನಕೆ ಕಿಡಿಯಾಗಿದೆ ಮನಸು,
ಹೊತ್ತಿ ಉರಿಯುತಿದೆ ಅಲ್ಲಿ ಕನಸಿನರಮನೆ,
ಬದುಕ ಕಟ್ಟುವ ತವಕ ಮುನ್ನಡಿಸಿದೆ ಕೈ ಹಿಡಿದು,
ನಾಳೆಗಳ ಹೊಸ ಬದುಕಿನ ಆಶಯವ ಹೊತ್ತು.

ಮರಗಟ್ಟಿದ ಮನಸು ಎಚ್ಚೆತ್ತಿದೆ ಇಲ್ಲಿ,
ಹೊಸ ಹುರುಪಿನ ಚೈತನ್ಯ ದೊರೆತಿದೆ ಮನಸಿಗೆ,
ಕನಸುಗಳ ಸಾಕಾರಗೊಳಿಸುವ ಮಂತ್ರವಿದೆ ಮನದಲ್ಲಿ,
ಹೇಳಿಕೊಟ್ಟಿದೆ ಬದುಕು ಎದ್ದು ನಿಲ್ಲುವ ಪಾಠ.

ಕಾದ ಕುಲುಮೆಯೊಳಗಿನ ಕಬ್ಬಿಣವು ಮನಸು,
ತಟ್ಟಬೇಕಿದೆ ಅದನು ತಣ್ಣಗಾಗುವ ಮೊದಲು,
ತುಂಬುತಿಹುದಿಲ್ಲಿ ಹೊಸ ಕನಸಿಗೆ ಆಕಾರ,
ಕಟ್ಟಬೇಕಿದೆ ಬದುಕ ನಾಳೆಗಳ ನಾಳೆಗೆ.

ಕಲಾವಿದನವನು ಯಾರಮ್ಮಾ?


ಗೆಳೆಯನೊಬ್ಬನ ಕುಂಚದಿ ಮೂಡಿದ ಚಿತ್ರಕೆ ಪದವಿಡುವ ಸಣ್ಣ ಪ್ರಯತ್ನ....

ನೀಲಿ ಬಾನಲಿ ಬೆಳ್ಳಿ ಚಂದಿರನ ಇಟ್ಟವನವನು ಯಾರಮ್ಮ?

ಕತ್ತಲೆ ಕಳೆದು ಲೋಕವ ಬೆಳಗೊ ಸೂರ್ಯಗೆ ಕೆಂಪು ಬಣ್ಣವನಿತ್ತವನಾರಮ್ಮ?


ಲೆಕ್ಕಕೆ ಸಿಗದ ಚುಕ್ಕಿಗೆ ಮಿಣುಗೋ ಬಣ್ಣವ ಬಳಿದವನಾರಮ್ಮಾ?

ಬಾನಿಗೆ ಹಾರಿ ಭುವಿಯನೆ ಸುತ್ತುವ ಹಕ್ಕಿಗಳಂದವ ನೋಡಮ್ಮಾ,

ಹಾರೋ ಹಕ್ಕಿಯ ರೆಕ್ಕೆಗೆ ಶಕ್ತಿಯ ತುಂಬಿದವನು ಯಾರಮ್ಮಾ?

ಮೇಘವು ಚುಂಬಿಸೊ ಗಿರಿ ಶಿಖರಕೆ ಹಸಿರನು ಹೊದಿಸಿದವನಾರಮ್ಮಾ?

ಭೂಮಿ ಬಾನನು ಸಂಧಿಸಿದ ಮೇಘಗಳಾಟವ ನೋಡಮ್ಮಾ.

ಸೃಷ್ಟಿಯ ಚಿತ್ರವ ಬಿಡಿಸಿದ ಕಲಾವಿದನವನು ಯಾರಮ್ಮಾ?

ಹಕ್ಕಿಯ ತರದಿ ಹಾರೋ ಆಸೆ ಏನು ಮಾಡಲಿ ಹೇಳಮ್ಮಾ?

ಮೇಘಗಳಂತೆ ತೇಲುವ ಆಸೆ ರೆಕ್ಕೆಗಳಿಲ್ಲ,ಪುಕ್ಕಗಳಿಲ್ಲ ಹೇಗೆ ಎಂದು ಹೇಳಮ್ಮಾ.

03 September, 2012

ಓ ಪ್ರೀತಿಯೇ...



ಕಾಮನಬಿಲ್ಲಿನ ಬಣ್ಣವ ತಂದೆ ಬಾಳಿಗೆ ನೀನಂದು,
ಪ್ರೀತಿಗೆ ನೂರು ಭಾವವ ತುಂಬಿದೆ ಈ ಮನಸಿಗೆ ನೀ ಬಂದು,
ನಿನ್ನಯ ಪ್ರೀತಿಯ ಎಂತು ಬಣ್ಣಿಸಲೇ ಹುಡುಗಿ ನಾನಿಂದು?


ಪ್ರೀತಿಯ ಕುಂಚದಿ ಬಿಡಿಸಿದೆ ಮನಸಿನ ಭಾವನೆ ನೀನಿಂದು,
ಪ್ರತಿ ರೇಖೆಯು ನೀಡಿದೆ ಪ್ರೀತಿಯ ಸುಂದರ ಹೂವೊಂದು,
ಪ್ರೀತಿಯ ರೀತಿಯ ಬಿಡಿಸಿದ ಚೆಲುವೆಯೆ ನಿನ್ನ ಕುಂಚವಾಗಲೆ ನಾನೆಂದೂ?

ಕನಸಿನ ಲೋಕಕೆ ರಂಗನು ಚೆಲ್ಲಿದೆ ಗೆಳತಿ ನೀ ಬಂದು,
ಸುಂದರ ಕನಸಿಗೆ ಹೊಸ ಚಿತ್ರವ ಬಿಡಿಸಿದೆ ಬಾಳಲಿ ನೀನಿಂದು,
ಓ ಕಿನ್ನರಿ ನಿನ್ನಯ ಸೇರುವ ಬಯಕೆಯ ತಿಳಿಸಲಿ ನಾನೆಂತು?

ಹೃದಯದ ಗುಡಿಯ ಬೆಳಗಿದೆ ನೀನು ಜೊತೆಯಾಗೆ ನಿಂದು,
ಪ್ರೀತಿಯ ಪ್ರಣತಿ ಬೆಳಗುವ ಆಸೆ ಬಾಳಲಿ ಮುಂದೆಂದೂ.
ಆರದಿರಲಿ ಪ್ರೀತಿಯ ಜ್ಯೋತಿ ಬಾಳಲಿ ಎಂದೆಂದೂ...

ನನ್ನವಳ ಕಂಡೀರಾ...



ತುಂತುರು ಮಳೆ ಹನಿಗಳೇ ನನ್ನವಳ ಕಂಡೀರಾ?
ಮಿಂಚು ಹೊಳಪಿನ ಚೆಲುವೆಯಾ ನೀವೆಲ್ಲಾದರೂ ನೋಡಿರಾ...

ಬೆಳ್ಳಕ್ಕಿ ಸಾಲುಗಳೇ ನನ್ನವಳ ಕಂಡಿರಾ?
ಬೆಳ್ಳಿಚುಕ್ಕಿ ನಾಚುವಂಥ ವೈಯಾರದವಳ ನೋಡಿರಾ...

ಅರಳಿ ನಗುವ ಹೂವುಗಳೇ ನನ್ನವಳ ಕಂಡಿರಾ?
ಅರಳು ನಗೆಯ ಸೂಸುವ ಬೆಡಗಿಯಾ ನೋಡಿರಾ...

ಹೂವಿಂದ ಹೂವಿಗೆ ಹಾರೋ ದುಂಬಿಗಳಿರಾ ನನ್ನವಳ ಕಂಡೀರಾ?
ತುಸುನಾಚುವ ಬಿನ್ನಾಣದ ಅಪ್ಸರೆಯ ನೋಡಿರಾ...

ಹಸುರ ಹೊದ್ದ ತರುಲತೆಗಳಿರಾ ನನ್ನವಳ ಕಂಡೀರಾ?
ಸ್ಪರ್ಶದಲ್ಲೆ ಮೈಯ ಮರೆಸುವ ನನ್ನಾಕೆಯ ನೋಡಿರಾ...

ಓ ಮುದ್ದು ಹುಡುಗ...



ಭಾರತ ಮಾತೆಯ ಓ ಮುದ್ದು ಕುವರ,
ಭರತನಾಳಿದ ಭುವಿಯ ಸತ್ಪ್ರಜೆಯಾಗು ನೀನು.

ನೂರು ಭಾಷೆಗಳ,ನೂರು ಜಾತಿಗಳ ತವರು ನಿನ್ನದು,
ಭೇಧಭಾವವ ಮರೆಸೋ ಐಕ್ಯ ಮಂತ್ರವ ಹಾಡಬೇಕಿದೆ ನೀನು.

ಜಗಕೆ ಶಾಂತಿಯಧಾಮವೀ ಭಾರತ,
ಮೆರೆಸಬೇಕಿದೆ ಇಲ್ಲಿ ಸಮರಸದ ಸಮನ್ವಯತೆಯ.

ಸನಾತನ ಸಂಸ್ಕೃತಿಯ ನೆಲೆಬೀಡು ಭಾರತ,
ನೀನಾಗಬೇಕಿದೆ ಸಂಸ್ಕೃತಿಯ ಬೆಳಗುವಾ ನಾಯಕ.

ರಾಮನಾಳಿದ ಭೂಮಿ,ಕೃಷ್ಣನಾಡಿದ ಧರೆಯಿದುವೇ,
ರಾಮನ ನಡತೆ,ಕೃಷ್ಣನಾ ನೀತಿ ನಿನ್ನದಾಗಲಿ ಓ ಮುದ್ದು ಹುಡುಗ.

ಕುಹಕಿಗಳ ನೂರು ತಂತ್ರವಿಹುದಿಲ್ಲಿ,ಮೋಸದ ರಣತಂತ್ರವಿಹುದಿಲ್ಲಿ,
ಮೋಸದ ಜಾಲವ ಸುಡಬೇಕಿದೆ ನೀನಿಂದು ಕ್ರಾಂತಿಯ ಕಿಡಿಯಿಂದ.

ಭ್ರಷ್ಟರಾ ಹಿಂಡು ಮೆರೆದಿಹುದು ಇಲ್ಲಿ,
ಭ್ರಷ್ಟತೆಯ ತೊಲಗಿಸೊ ವೀರಸೇನಾನಿ ನೀನಾಗು .

ಜಗವೇ ಎದುರಾದರೂ ಅಳುಕದಿರು ನೀನು,
ಭರತಮಾತೆಯ ಹೆಸರುಳಿಸೋ ಕ್ರಾಂತಿಗುರುವಾಗು ಓ ಮುದ್ದು ಹುಡುಗ...