09 June, 2013

ಕೊಳೆಯ ತೊಳೆಯೋಣ...



ಕಸವ ಗುಡಿಸೋಣ ಬನ್ನಿ
ಮನಸ ಕೊಳೆಯ ತೊಳೆಯೋಣ,
ಜಾತಿ ಧರ್ಮದ ಜಾಡ್ಯ ಕಳೆಯೋಣ
ಮೇಲುಕೀಳಿನ ಪರದೆ ಹರಿಯೋಣ.

ಪರರ ಗೌರವಿಸೋ ಗುಣವ ಬೆಳೆಸೋಣ
ಅಪನಂಬಿಕೆಯ ಅಪಶ್ರುತಿಯ ಅಳಿಸೋಣ,
ಪ್ರೀತಿ ಸ್ನೇಹದ ಗಿಡವ ಬೆಳೆಸೋಣ
ಮನಸ ಅಂಗಳದಿ ಶಾಂತಿಯ ಹೂವ ಅರಳಿಸೋಣ.

ಪರರ ಸಂಸ್ಕೃತಿಯ ಅರಿಯೋಣ
ಸಂಸ್ಕಾರವಂತರಾಗಿ ಬದುಕೋಣ,
ಲೋಭ ಮೋಹದ ಕೊಳೆಯ ತೊಳೆಯೋಣ
ದ್ವೇಷ ಅಸೂಯೆಗಳ ಕಳೆಯ ಕೀಳೋಣ.

ಕಟ್ಟಳೆಗಳ ಅಂಧಕಾರವ ಕಳೆಯೋಣ
ಅಹಂಕಾರದ ಮನೆಯ ಮುರಿಯೋಣ,
ಮನಕೆ ಅಂಟಿದ ಶಾಪವ ಕಳೆಯೋಣ
ಪ್ರೀತಿ ದೀಪವ ಹಚ್ಚಿ
ಮನಸ ಗುಡಿಯ ಬೆಳಗೋಣ.

2 comments:

  1. ತುಂಬಾ ನೆಚ್ಚಿಕೆಯಾಯ್ತು ಕವನದ ಭಾವ. ಇಂತಹ ಆಶಯ ನಮ್ಮಲ್ಲಿ ಬೆಳಕನ್ನು ತುಂಬಲಿ.

    ReplyDelete