ಬದುಕ ಕರಗಿಸಬೇಡ
ಓ ವಿಧಿಯೇ
ಭಾವನೆಗಳ ಬರಿದಾಗಿಸಿ
ಕರಗಿಹುದು ಕನಸುಗಳು
ನಾಳೆಯ ಚಿಂತೆಯಲಿ,
ಸುಡುತಿಹುದು ಚಿಂತೆಯಾ
ಚಿತೆಯಲ್ಲಿ ಬದುಕು.
ಸುಡುವ ಬಿಸಿಲಿಗೂ ಬಾಡದ
ದೇಹಕೆ
ಮಳೆ ಹನಿಯು ಕೂಡ
ಭಾರವಾಗಿದೆಯಿಲ್ಲಿ,
ರೋಮ ರೋಮದಿ ಹುರುಪು
ತುಂಬಿದ ದೇಹ
ಬಟ್ಟ ಬಯಲಲಿಟ್ಟು ಸುಟ್ಟ
ಹಾಗಿದೆಯಿಲ್ಲಿ.
ಭಾವನೆಗಳ ಚದುರಿಸಿ
ಕನಸುಗಳ ಕೊಲ್ಲಬೇಡ
ಬದುಕೇ
ನಿಂತರೂ ನಿಲ್ಲಬಹುದು ಉಸಿರು
ಈ ಹತಾಶೆಯೊಳಗೆ,
ಕುದಿವ ಜ್ವಾಲಾಮುಖಿಯಾಗಿದೆ
ಮನವು
ತಂಪಾಗಬೇಕಿದೆ ನಿನ್ನ
ಕರುಣೆಯೊಳು
ಉಕ್ಕಿ ಚಿಮ್ಮುವ ಮುನ್ನ.
ಭಾವೋಗ್ವೇಗದೊಳು ಮುಳುಗಿ
ಕರಗಿ ಹೋಗುವ ಮುನ್ನ
ನಿನ್ನೊಲುಮೆ ಬೇಕಿದೆ ಇಲ್ಲಿ,
ನಕ್ಕು ನಗಲಾರದೇ
ಅತ್ತು ಅಳಲಾರದೇ
ಚಡಪಡಿಸುವ ಮನಕೇ
ಆರದಿರಲಿ ಈ ಬದುಕಿನ ದೀಪ
ಕರುಣಿಸು ನೀನು ಓ ವಿಧಿಯೇ...
ಜೆ. ಪಿ.ಪಿ. ನಿಮ್ಮ ಬ್ಲಾಗ್ ನೋಡಿ ಖುಷಿ ಅಯ್ತು. ಶುಭವಾಗಲಿ .....
ReplyDelete