29 May, 2014

ದ್ವೇಷ...


ಮುಷ್ಟಿಯಗಲದ ಹೃದಯದೊಳಗೆ
ದ್ವೇಷದ ಬೀಜವ ಬಿತ್ತಿದವರಾರು,
ಹರಿಯುತಿದೆ ನರನಾಡಿಗಳಲಿ
ದ್ವೇಷದ ಬೆಂಕಿಯದು ಅಜ್ಞಾತವಾಗಿ.

ತಿನ್ನುವ ಅನ್ನವದು ಕಲಿಸಿತೆ ಮನುಜಗೆ
ಮಣ್ಣಿನ ಗುಣವದು ಇರಬೇಕಿತ್ತಲ್ಲಾ,
ಸತ್ತರು ಬಿಡದ ದ್ವೇಷದ ಬೆಂಕಿ
ಬೂದಿಯಾಗಬೇಕಿತ್ತು ಮಣ್ಣಿನ ಗುಣದೊಳು.

ಹರಿಯುವ ನೀರದು ಕುಡಿಸಿತೆ ವಿಷವ
ದ್ವೇಷವೆಂಬ ಅಜ್ಞಾನದ ಹಾಲಾಹಲ,
ಕುಂತರೂ ನಿಂತರೂ ಕುದಿಯುವ ಜ್ವಾಲೆಯು
ಆರಿ ಹೋಗಬೇಕಿತ್ತು ನೀರಿನ ಗುಣಕೆ.

ಉಸಿರಾಡೋ ಗಾಳಿಯು ಬೆರೆಸಿತೆ
ಮಂದ ಬುದ್ಧಿಯ ದ್ವೇಷದ ಭಾವವ,
ಹಿಂಸೆಯ ಹರಡುವ ಧೂರ್ತ ಬುದ್ಧಿಯನು
ತಂಪಾಗುವ ಗುಣ ಜೊತೆಗೇ ಇರಲು ಗಾಳಿಯು ತಾನು ಹೇಗೆ ಹರಡೀತು.

ಮಣ್ಣು ಅನ್ನ ನೀರು ಗಾಳಿ ಇವು ಯಾವುವು ಹರಡಲೇ ಇಲ್ಲ
ಮತ್ತೆ ಹೇಗೆ ತಾನೇ ಹರಡುತಿಹುದು ದ್ವೇಷದ ಜ್ವಾಲೆ,
ಮೂಢ ಮನುಜನ ಎದೆ ಎದೆಯೊಳಗೆ
ಪ್ರೀತಿಯ ಕೊರತೆಯ ಕಾರಣವಿದ್ದರೂ ಇರಬಹುದೇ.

No comments:

Post a Comment