30 June, 2014

ಹವಿಸ್ಸು...



ಎಲುಬಿನ ಗೂಡಿಗೆ ಚರ್ಮದ ಹೊದಿಕೆಯ ಮಾಡಿಹ
ಪಂಚಭೂತಗಳಿಗೆ ಹವಿಸ್ಸನ್ನರ್ಪಿಸಬೇಕು,
ಅರಿಷಡ್ವರ್ಗಗಳ ದಮನಿಸೆ ನಾನು
ದೇಹವ ಯಜ್ಞಕುಂಡವಾಗಿಸಬೇಕು.

ಮನಸಿನ ಹಿಡಿತವ ತಪ್ಪಿಸುವ ಕಾಮವ
ಅಗ್ನಿಗೆ ಅರ್ಪಿಸಬೇಕು,
ಕಾಮದಹನ ಮಾಡುತ ಜೊತೆಯಲಿ
ಮನುಜತೆಯ ಪ್ರೀತಿಯ ಬೆಳಗಬೇಕು.

ಮನಸನು ಸುಡುವ ಕ್ರೋಧದ ಬೆಂಕಿಗೆ
ನೀರನು ಸುರಿಯಬೇಕು,
ಹೊತ್ತಿ ಉರಿಯುವ ಮನಸನು ಇಂದು
ಶಾಂತಗೊಳಿಸಬೇಕು.

ಮನಸಲಿ ಮಂಡಿಗೆ ತಿನ್ನುವ ಮದವನು
ಮಣ್ಣಲಿ ಹೂತು ಬಿಡಬೇಕು,
ಮತ್ತೆ ಚಿಗುರಿ ಬರದಿರುವಂತೆ
ಅಷ್ಟಬಂಧವ ಬಿಗಿಯಬೇಕು.

ಪರರ ನೋಡಿ ಕರುಬುವ ಮಾತ್ಸರ್ಯವ
ಗಾಳಿಯಲಿ ತೇಲಿ ಬಿಡಬೇಕು,
ಉಸಿರಿಗೂ ಸಿಗದ ಎತ್ತರಕೆ
ಅದರ ಕಳುಹಿಸಿಕೊಡಬೇಕು.

ಮನಸಲಿ ಕಳವಳಗೈಯ್ಯುತಲಿರುವ
ಲೋಭ ಮೋಹಗಳ ಆಕಾಶಕೆ ತೇಲಿಬಿಡಬೇಕು,
ದುರಾಸೆಯ ದೂರ ಸರಿಸುತಾ
ಮೋಹದ ಛಾಯೆಯಿಂದ ಪಾರಾಗಬೇಕು.

2 comments:

  1. ಮನೋ ಶುದ್ದಿಯತ್ತ ಪ್ರೇರೇಪಿಸುವ ಒಳ್ಳೆಯ ಕವನ.

    ReplyDelete