ಹುಟ್ಟು ಸಾವುಗಳ ಈ ಜಂಜಡದೊಳಗೆ
ತಿಳಿದಿಲ್ಲ ನಾನು ನಾಳೆಯನ್ನೇ,
ಹೇಗೆ ತಿಳಿಯಲಿ ಇನ್ನು
ಮುಂದೊಂದು ಜನ್ಮದಾ ರಹಸ್ಯವನ್ನು.
ನಂಬಿಕೆಯೇ ಜೀವನವೆಂದರು ಹಿರಿಯರು
ತಿಳಿದದನು ಬದುಕುತ್ತಿರುವೆ ಸಾಮಾನ್ಯನಂತೆ,
ಮುಂದೊಂದು ಜನ್ಮದಾ ಕಲ್ಪನೆಯಿದೆ ನನ್ನೊಳಗೂ
ನಂಬಿಕೆಯೇ ಹುಟ್ಟಿಸಿಹುದು ಅಂಥಹ ಆಸೆಯೊಂದ.
ಹಿಂದೊಂದು ಜನ್ಮವದು ಇತ್ತೋ ಗೊತ್ತಿಲ್ಲ
ಕೆದಕಲಾರೆ ನಾ ನನ್ನ ಪೂರ್ವವನ್ನು,
ಇಂದಿರುವುದು ಸತ್ಯವದು ತಿಳಿದಿಹುದು ನನಗೆ
ಮುಂದೊಂದು ಜನ್ಮವಿರಬಹುದೆಂಬ ಕಲ್ಪನೆಯೂ.
ಏಳು ಜನ್ಮಗಳ ಕನಸಿಲ್ಲ ನನಗೆ
ಮನುಜ ಜನ್ಮವ ಪಡೆದುದಕೆ ಹೆಮ್ಮೆಯಿದೆ ಜೊತೆಗೆ,
ಮತ್ತೊಂದು ಜನ್ಮವಿರುವುದಾದರೆ ಮತ್ತೆ ಹುಟ್ಟುವ ಹಂಬಲ
ಪಡೆಯಬೇಕು ನಾ ಮತ್ತೊಂದು ಜನ್ಮವ ಈ ಭುವಿಯೊಳಗೆ.
ಕರ್ಮಫಲಗಳ ಜೊತೆಗೆ ನಿರ್ಧಾರವಾಗುವುದಾದರೆ
ಆಗಲಿ ಇನ್ನೊಂದು ಜನ್ಮ ಪ್ರಾಣಿಯಾಗೇ,
ಮನುಜ ಜನ್ಮದಲಿಗೈದ ತಪ್ಪಿಗೆ ಪ್ರಾಯಶ್ಚಿತದಂತೇ
ಮತ್ತೆ ಹುಟ್ಟುವೆ ನಾನು ಈ ಬ್ರಹ್ಮಾಂಡದೊಳಗೆ.
ನನ್ನೊಳಗೂ ಒಂದು ಆಸೆಯಿದೆ ಮನುಜ ಜನ್ಮವದು ಸಾಕು
ಬೇಕೆನಗೆ ಶ್ರೇಷ್ಠ ಪ್ರಾಣಿಜನ್ಮವೊಂದು,
ಹೌದು ಹುಟ್ಟಬೇಕು ನಾ ಗೋಮಾತೆ ಗರ್ಭದಲೇ
ಜಗಕೆ ಎದೆಹಾಲ ಕುಡಿಸಿ ಮಾತೃತ್ವ ಮೆರೆಯಬೇಕು.
ಕಾಮಧೇನುವಿನ ಜನುಮ ದೊರೆಯಲಿ ನಮಗೂ.
ReplyDeleteಉತ್ತಮ ವಸ್ತು ನಿರೂಪಣೆ ಮತ್ತು ಭಾಷಾ ಸರಳತೆ ಮನಸೆಳೆಯಿತು.