ದೇವಾ ನನ್ನೆದೆಯಾ ಭಕುತಿಯದು ಭಯವಂತೂ ಅಲ್ಲ
ನಿನ್ನೆಡೆಗೆ ನನಗಿರುವ ಒಲುಮೆಯಷ್ಟೇ
ಶಾಪ ಕೋಪಗಳ ಪರಿತಾಪವೆನಗಿಲ್ಲಾ .
ಪೂಜಿಪೆನು ನಾನು ಇಲ್ಲಿ
ನಿನ್ನ ಮೇಲಿನ ಪ್ರೀತಿಯಿಂದಷ್ಟೇ
ಋಣ ಸಂದಾಯದ ಭಾವವಂತು ಅಲ್ಲವೇ ಅಲ್ಲಾ.
ಕಂಡಿಲ್ಲ ನಾನು ನಿನ್ನನ್ನು ಎಂದೂ
ಪೂಜಿಪೆನು ನಾನು ಕರವ ಮುಗಿದು
ದರುಶನವ ನೀ ನೀಡುವೆಯೆಂಬ ಭ್ರಮೆಯಂತೂ ಇಲ್ಲ.
ಬ್ರಹ್ಮಾಂಡದ ಚಿಕ್ಕ ಕಣವಷ್ಟೇ ನಾನು
ಇದು ನಾನು ತಿಳಿದ ಜೀವನ ಸತ್ಯ
ಅದಕ್ಕೆಂದೇ ಪೂಜಿಪೆನು ದೇವ ನಿನ್ನಾ.
ನನ್ನೊಳಗೂ ಇರುವೆ ನೀನು
ಮಣ್ಣೊಳಗೂ ಇರುವೆ ಎಂಬುದದು ಸತ್ಯ
ಸದ್ಗುಣಗಳ ಕಾಯೋ ಎಂಬುದಷ್ಟೇ ಹರಕೆ.
ಹೆಸರೇಕೆ ನಿನಗೆ ಆದಿ ಅಂತ್ಯವಿಲ್ಲದವಗೆ
ನೀನಂತೂ ಸರ್ವವ್ಯಾಪಿ ಸರ್ವಶಕ್ತ
ನಾನೆಂದೂ ಇಲ್ಲಿ ಅಲ್ಪರಲಿ ಅಲ್ಪ.
ಪ್ರೀತಿಯಿಂದಲಿ ಜಗವು ಭಯವೇಕೆ ನನಗೆ
ನಿನ್ನೊಲುಮೆಯಿಂದಲಿ ನಗುವಿಹುದು ಜೊತೆಗೆ
ಧರ್ಮಮಾರ್ಗದಲಿ ನಡೆಸುವಾ ಬೆಳಕು ನೀನು.
ನಂಬಿಕೆಯು ನೀನು,ಜ್ಞಾನದೀವಿಗೆಯೂ ನೀನೇ
ಹುಟ್ಟು ಸಾವುಗಳ ಗುಟ್ಟ ತಿಳಿಯದಾ ಮೂಢ ನಾನು
ಅದಕ್ಕೆಂದೇ ನಿನ್ನ ನಂಬಿಹೆನು ಓ ಸರ್ವಾಂತರ್ಯಾಮಿ.
ಧರ್ಮಮಾರ್ಗದಲಿ ನಡೆಸುವಾ ಬೆಳಕು ನೀನು ಇದು ನಮ್ಮೆಲ್ಲರ ಒಕ್ಕೊರಲ ಕರೆ ಮತ್ತು ಬಿನ್ನಹ.
ReplyDeletehaudu sir
Delete