ಬದುಕೇ ಒಮ್ಮೆ ನೂಕಿಬಿಡು ನೆನಪ ಮಡಿಲೊಳಗೆ
ಸಾಕೆನಿಸಿದೆ ಈಗ ಜಗದ ಜಂಜಾಟ,
ಮರೆಯಬೇಕು ನಾನು ಕಾಡೋ ನೂರು ನೋವುಗಳ
ಪಡೆಯಬೇಕು ಸುಖನಿದ್ದೆ ನೆನೆಪ ಮಡಿಲೊಳಗೆ.
ಕರುಣಿಸು ಬದುಕೇ ಮರೆವೆಂಬ ವರವ
ಕುದಿಯುತಿರುವ ಮನಸ ಶಾಂತಗೊಳಿಸಬೇಕು,
ಒಲವ ಸುಳಿಯಿಂದ ಮುಕ್ತವಾಗಿಸು ಎನ್ನ
ಜಾರಬೇಕಿದೆ ಈಗ ಮರೆವ ತೆಕ್ಕೆಯೊಳಗೆ.
ಹರಸಿದ್ದು ಸಾಕಿಲ್ಲಿ ಈ ಒಲವ ಯಾತ್ರೆಯಲ್ಲಿ
ಒಂಟಿ ಪಯಣ ಬೇಕೆನಿಸಿದೆ ಕರುಣಿಸು ಬದುಕೇ,
ಪ್ರೀತಿಯಿದು ಸುಂದರ ನೋಡೋ ನೋಟಕ್ಕಷ್ಟೇ
ಅನುಭವಿಸಲಾರೆ ನಾ ಅದರ ಆಳ ಅಗಲ.
ಬತ್ತಿ ಹೋದ ಕನಸುಗಳ ಮತ್ತೆ ಕರುಣಿಸು ಬದುಕೇ
ಚಂದ್ರ ತಾರೆಗಳ ಜೊತೆಗೂಡಿ ನಗಬೇಕು ನಾನು,
ನೋವ ಮರೆಸುವ ಕನಸುಗಳು ಬೇಕು ಬದುಕಿಗೆ
ಹರಸು ನೂರು ಹೊಸ ಕನಸುಗಳ ಬದುಕ ಕಟ್ಟೋಕೆ.
ಕನಸುಗಳಿರಲಿ ಬೆಚ್ಚಗೆ ಎದೆಯಾಳದೊಳಗೆ
ಪ್ರೇಮಿಯಾಗಿಸದಿರು ಎನ್ನ ಬದುಕ ಜಾತ್ರೆಯಲಿ,
ನಗಬೇಕು ನಕ್ಕು ಅಳುವ ಮರೆಯಬೇಕು
ಕರುಣಿಸು ಬದುಕೇ ನೆನಪುಗಳ ಚಿಂತೆ ಮರೆಸೋಕೆ.
No comments:
Post a Comment