02 December, 2015

ಮರೀಚಿಕೆ....



ಹುಟ್ಟುತ್ತಾ ಜೀವಿಯದು ದೈವೀ ಸ್ವರೂಪ
ಬೆಳೆಯುತ್ತಾ ಹೊದಂತೆ ಬೆಳದಿಂಗಳಾ ರೂಪ,
ಬುದ್ಧಿ ಬೆಳೆಯುವವರೆಗೆ ಸೃಷ್ಟಿಯ ಅದ್ಭುತ ರೀತಿ
ಎದ್ದು ನಿಂತ ಮೇಲೆ ಬದಲಾಯ್ತು ದಾನವನ ರೀತಿ.

ತಾಯಾದಳು,ಗುರುವಾದಳು ಪ್ರಕೃತಿಯು ಜೀವಿಗೆ
ಬದುಕುವ ಪಾಠವನ್ನಷ್ಟೇ ಹೇಳಿಕೊಡುವಳು ತಾನಿಲ್ಲಿ,
ಪ್ರಕೃತಿಯನೇ ದಂಡಿಸುವ ಗುಣವೆಲ್ಲಿಂದ ಬಂತು
ತನ್ನತನವನು ಮರೆವ ಧೂರ್ತ ಬುದ್ಧಿಯ ಹುಟ್ಟು.

ಉಸಿರು ನೀಡಿದ ವಾಯು ಬದುಕನ್ನು ಹರಸಿದಾ
ಉಸಿರ ಕೊಲ್ಲುವ ಗುಣವೆಲ್ಲಿಂದ ಬಂತು ಈ ಜೀವಿಗೆ,
ನೀರಡಿಕೆ ಇಂಗಿಸಿ ಪ್ರಾಣವನು ಉಳಿಸಿದಾ ವರುಣ
ವಿಷವಕಾರುವ ಬುದ್ಧಿಯಾ ಕಲಿಯಿತೆಲ್ಲಿ ಜೀವಿಯು.

ಬದುಕ ಚೈತನ್ಯಗೊಳಿಸುವ ಬಿಸಿಯನ್ನಷ್ಟೇ ನೀಡಿದನು ಅಗ್ನಿ
ಸುಡುವ ಗುಣವದುವು ಹೇಗೆ ಆವರಿಸಿತೋ ಒಮ್ಮೆಲೇ,
ಬದುಕುವ ಅನಂತ ಅವಕಾಶವ ತೋರಿತು ಆಗಸ
ಅಕಾಶವನೇ ಮೀರಿ ಬೆಳೆಯಿತು ತನ್ನೊಳಗಿನ ಅಹಂಕಾರವೇತಕೋ.

ಯಾರು ಕರುಣಿಸಲಿಲ್ಲ ದ್ವೇಷದಾ ಕಿಡಿಯ
ಹೊತ್ತಿ ಉರಿಯುತಿದೆ ಯಾಕೆ ಜೀವಿ ಜೀವಿಗಳ ನಡುವೇ,
ತಿಂದನ್ನ ಆಹಾರಗಳಲ್ಲಿ ಇರಲಿಲ್ಲ ವಿಷವೂ
ಮರೀಚಿಕೆಯಾಯ್ತಿಲ್ಲಿ  ಜೀವನದ ಗುಟ್ಟು.

No comments:

Post a Comment