08 January, 2016

ಪ್ರೀತಿ ಜಾತ್ರೆ...



ನನ್ನೂರಲಿ ನಡೆಯುತ್ತಿದೆಯಲ್ಲಿ ದೇವರಾ ಜಾತ್ರೆ
ಇಲ್ಲಿ ನನ್ನೆದೆಯಲ್ಲಿ ನಡೆಯುತ್ತಿದೆ ನಿನ್ನ ನೆನಪುಗಳ ಯಾತ್ರೆ,
ಊರ ಹರಸುವ ದೇವನಲ್ಲಿ ರಥದೊಳಗೆ ವಿರಾಜಮಾನ
ಪ್ರೀತಿ ಸುರಿಸುವ ನೀನಿಲ್ಲಿ ನನ್ನ ಎದೆಯೊಳಗೂ.

ತೇರನೆಳೆಯುವ ಭಕ್ತರದು ಭಕ್ತಿಯಾ ಘೋಷ
ಇಲ್ಲಿ ನನ್ನೆದೆಯೊಳಗೆ ಮೊಳಗಿದೆ ಪ್ರೀತಿಯಾ ಘೋಷ,
ಭಕ್ತರಲ್ಲಿ ಸಂತೃಪ್ತ ಹರಸೋ ದೇವನನು ಕಂಡು
ನಾನಿಲ್ಲಿ ಸಂತೃಪ್ತ ಮನಸ ಪರದೆಯಲಿ ನಿನ್ನ ಬಿಂಬವನು ಕಂಡು.

ಬದುಕ ತೇರನೆಳೆವೆ ನಿನ್ನೊಲವ ಜಾತ್ರೆಯಲಿ
ಕನಸುಗಳಿಂದ ಸಿಂಗರಿಸುವೆ ಈ ಒಲವ ಯಾತ್ರೆಯನು,
ಭಾವ ತೋರಣವಿಹುದಿಲ್ಲಿ ನಿನ್ನಯಾ ಸ್ವಾಗತಕೆ
ನಗುವ ಚೆಲ್ಲುತಿರು ನೀನಿಲ್ಲಿ ಹೃದಯ ಮಂದಿರದೆ.

ಬದುಕಾಗಿದೆ ಎನಗಿಲ್ಲಿ ನಿತ್ಯವೂ ಜಾತ್ರೆ
ನಿನ್ನ ಪ್ರೀತಿಯದು ಪ್ರತಿ ಕ್ಷಣವೂ ಪುಣ್ಯ ಯಾತ್ರೆ,
ಮನಸ ಕನಸುಗಳಿಗಿಲ್ಲಿ ಸುಗ್ಗಿಯಾ ಕಾಲ
ಬದುಕಿಲ್ಲಿ ಹರಸಿದೆ ನಿತ್ಯ ವಸಂತ ಕಾಲ.




No comments:

Post a Comment