24 January, 2016

ಇತಿಹಾಸ...


ಧರಣಿಯೊಳಗಿದೆ ನೂರಾರು ವ್ಯಥೆಯ ಕತೆಯೂ
ಕೆದಕಿ ನೋಡು ಇತಿಹಾಸವ,
ರಕುತ ಚೆಲ್ಲಿದ ನೂರು ಕತೆಯಾ
ದಾನವತೆಯು ಮೆರೆದ ದುರಂತ ವ್ಯಥೆಯಾ.

ಜಾತಿಗಾಗಿ ನಡೆಯಿತಿಲ್ಲಿ ಕಲಹ
ಪ್ರೀತಿ ಹೆಸರಲೂ ಹರಿಯಿತಿಲ್ಲಿ ರಕುತ,
ಅಮಾಯಕರ ರುಂಡವಿಲ್ಲಿ ಉರುಳಾಡಿತು
ಕೇಳು ನೀನು ಮನುಜತೆಯ ಮರೆತ ಕತೆಯಾ.

ಭೂಮಿಗಾಗಿ ನಡೆಯಿತಿಲ್ಲಿ ಘೋರ ಕಾಳಗ
ಸ್ವಾತಂತ್ರ್ಯದ ಹೆಸರಲ್ಲು ಭುವಿಯು ಕೆಂಪಾಯಿತು,
ಯುಗ ಯುಗಗಳು ಉರುಳಿ ನಿಂತವು
ಕೇಳು ನೀನು ಭೂಮಿ ಕಂಡ ವ್ಯಥೆಯ ಕತೆಯಾ.

ದ್ವೇಷಕಾಗಿ ಹೊತ್ತಿ ಉರಿಯಿತಿಲ್ಲಿ ಬದುಕು
ಮನದ ಬೆಂಕಿಗೆ ಭಸ್ಮವಾದವು ತಲೆಮಾರುಗಳು,
ತಲೆ ಕಾಯಲಿಲ್ಲ ಮನುಜತೆಯ ಪ್ರೀತಿ
ನೋಡು ಬಾ ನೀನು ಇತಿಹಾಸಗಳ ವ್ಯಥೆಯಾ.

ನಿತ್ಯವೂ ನಡೆಯುತಿದೆಯಿಲ್ಲಿ ಹೊಸ ಇತಿಹಾಸಕೆ ಮುನ್ನುಡಿ
ರಕ್ತವರ್ಣದ ಅಧ್ಯಾಯವು ಮತ್ತೆ ಮತ್ತೆ ತೆರೆಯುತಾ,
ಮಾನವತೆಯ ಮರೆತ ಮನಸುಗಳೇ ಇಲ್ಲಿ ಮೇಳೈಸುತ
ನೋಡು ಬಾ ನೀನು ಮನುಜ ಕುಲದ ಅಧಃಪತನದ ಕತೆಯಾ.

3 comments:

  1. ತನ್ನ ತಾನೇ ಕೊಲ್ಲುತ್ತ ಸಾಗುವುದೇ ಮನುಜನ ಹಪಹಪಿ ಕರ್ಮ!

    ReplyDelete