20 November, 2016

ಒಲವೊಳಗೆ...


ಓ ಒಲವೇ ನೀನಿಂದು ಹರಸೆನ್ನನು
ಒಲವಿಂದ ಈ ಮನಸ ಮುನ್ನಡೆಸು ನೀ,
ಹರುಷಕ್ಕೆ ನಿನ್ನ ಹೆಸರು ನಾ ಕೊಡುವೆನು
ಮುನಿಸನ್ನ ನೀ ಮರೆತು ಬರಬೇಕಿದೆ...

ಜೊತೆಯಾಗು ಓ ಮನಸೇ ಈ ಪಯಣಕೆ
ನೋವಿಗೂ ನಲಿವಿಗೂ ನಾ ಹೆಗಲಾಗುವೆ,
ಪ್ರತಿಕ್ಷಣವೂ ನೀ ಅರಳು ಖುಷಿಯಿಂದಲೇ
ನಗುವಲ್ಲೇ ಮಗುವಾಗಿ ಜೊತೆಯಾಗುವೆ...

ಜಗವಿಲ್ಲಿ ಡೊಂಬರಾಟ ಈ ಪ್ರೀತಿಗೆ
ಕುಣಿಯೋಣ ಬಾ ಇಲ್ಲಿ ಜೊತೆಯಾಗಿಯೇ,
ಹುಸಿ ಕೋಪ ತುಂಟಾಟ ಕಣ್ಣಮುಚ್ಚಾಲೆಯೂ
ಈ ಪ್ರೀತಿಗೆ ಜಗವೆಂದೂ ಜಾಣ ಕುರುಡು...

ಬದುಕಿಲ್ಲಿ ಬೊಂಬೆಯಾ ಆಟದಂತೆ
ತಿಳಿದರೂ ತಿಳಿಯದಾ ಮಾಯೆಯಂತೆ,
ತಾಳ್ಮೆಯೂ ಇರಬೇಕು ಇಲ್ಲಿ ಈಸಲಿಕ್ಕೆ
ಧೈರ್ಯವೂ ಬೇಕಿಲ್ಲಿ ಜಗವ ಪ್ರೀತಿಸೋಕೆ...

ಖುಷಿಗೊಂದು ಕಾರಣವು ಯಾಕೆ ಬೇಕು
ಪ್ರೀತಿಯಾ ನೆಪವಿಲ್ಲಿ ಸಾಲದೇನು,
ಬದುಕೆಂಬುದೇ ಪ್ರೀತಿಯಾಗಿರಲು ಈ ಜಗದೊಳು
ನಾನು ನೀನಿಲ್ಲಿ ಒಲವಾ ರೀತಿಯಷ್ಟೇ...

No comments:

Post a Comment