ಭರತ ಭೂಮಿಯ ಪುಣ್ಯದ ಮಣ್ಣೊಳು
ಮೆರೆಯುತಿರುವ ಗಂಧದ ಬೀಡು,
ಶ್ರೀಗಂಧದ ಗುಡಿಯಾ ಕನ್ನಡ ಕಂಪಲಿ
ಉಸಿರಾಡುತಿರುವ ಕೂಸು ನಾನಿಲ್ಲಿ...
ಪಂಪ ರನ್ನರ ಚಂದದ ನಾಡಲಿ
ಅಕ್ಕ ಬಸವರ ಭಾವೈಕ್ಯದ ಬೀಡಿದು,
ಬೇಲೂರಿನ ಶಿಲೆಗಳ ವೈಭವದಿ
ಅರಳ ಬಯಸುವ ಹೂವು ನಾ...
ಕನ್ನಡಮ್ಮನ ಜಾತ್ರೆಯಿಲ್ಲಿ ನಿತ್ಯವೂ
ಮಂತ್ರ ಘೋಷಗಳಿಲ್ಲದ ನುಡಿ ನಮನವೂ,
ಕನ್ನಡಮ್ಮನ ತೇರು ಎಳೆಯುವ ಹಾದಿಯಲಿ
ಹೂವಿನ ಹಾಸು ನಾನಾಗ ಬಯಸುವೆನಿಲ್ಲಿ ...
ಕಲ್ಪವೃಕ್ಷದ ನಾಡಲಿ ಕನ್ನಡಮ್ಮನಿಗೆ ಆರತಿ
ಕೋಟೆ ಕೊತ್ತಲುಗಳ ಬೀಡಲಿ ಅವಳದೇ ಕೀರುತಿ,
ಇತಿಹಾಸ ಬರೆದ ಸಾಮ್ರಾಜ್ಯಗಳ ಶೌರ್ಯದಿ
ಬೆಳೆಯಬೇಕು ನಾ ಈ ಕನ್ನಡಮ್ಮನ ಮಡಿಲಲಿ...
No comments:
Post a Comment