31 October, 2022

ಭರವಸೆಯೇ ಬೆಳಕು...

ಬದುಕು ನಡೆಯೋ ಬಯಲಲ್ಲಿ
ಬಲು ಕತ್ತಲ ದಾರಿ ಇದೆಯಿಲ್ಲಿ,
ಹೆಜ್ಜೆ ಹೆಜ್ಜೆಯೂ ಪರೀಕ್ಷೆಯಂತಿರಲು
ಭರವಸೆಯೇ ದಾರಿ ದೀಪವೂ...

ನೂರಾರು ನೋವು ಇಹುದಿಲ್ಲಿ
ಸಾವಿರ ಕನಸಿಗೆ ಸವಾಲಾಗಿ,
ನಗುವನು ಮರೆಸಿ ಬಿಡುವಂತ
ಕ್ಷಣಗಳು ಸಾವಿರ ಇಹುದಿಲ್ಲಿ...

ಯಾವುದೋ ಜನ್ಮದ ಋಣವಿಲ್ಲಿ 
ಬದುಕನು ಆವರಿಸಿರುವಂತೆ,
ಯಾವುದೋ ಕರ್ಮದ ಫಲದಂತೆ
ಜೀವಕೆ ರೋಧನೆ ತಪ್ಪದಿಲ್ಲಿ...

ಕನಸುಗಳು ಮರೆತರೂ ಬದುಕಲ್ಲಿ
ಭರವಸೆಯೂ ಬತ್ತದಿರಲಿ ನಾಳೆಗೆ,
ನಗುವುದ ಮರೆತರೂ ಬಾಳಲ್ಲಿ
ಸೋಲನು ತಬ್ಬದಿರಲಿ ಮನಸಿಲ್ಲಿ...




No comments:

Post a Comment