27 February, 2023

ಬದುಕ ಬನದಲಿ...

ಅಜ್ಞಾನದ ಮೋಡವು ಕವಿದಿರೆ
ಬದುಕಿನಾ ಬಯಲೊಳು,
ಮನಸಿನ ಮನೆಯೊಳು
ಅಂಧಕಾರವೇ ನಿತ್ಯವೂ...

ಅಪನಂಬಿಕೆಯ ಬಿರುಗಾಳಿ ಜೋರಾಗಿರಲು
ಬದುಕಿಲ್ಲಿ ಕತ್ತಲೆಯು ಮನುಜಾ,
ಪ್ರೀತಿಯಾ ದೀಪವಿಲ್ಲಿ ಬೆಳಗದು
ನಂಬಿಕೆಯಾ ಗೋಡೆಯೂ ಇಲ್ಲದೇ...

ಕಷ್ಟಗಳ ಬಿರುಬಿಸಿಲು ಸುಡುವುದು
ಆಸೆಗಳ ಬೆಟ್ಟವೂ ಕರಗೋವರೆಗೂ,
ಕಣ್ಣೀರು ಮಳೆಯಂತೆ ಸುರಿಯುವುದು
ಕರ್ಮದ ಮಣ್ಣಿಲ್ಲಿ ತಣಿಯುವವರೆಗೂ...

ಭರವಸೆಯ ಬಂಡೆಯನೇರಬೇಕು
ಬದುಕ ಪ್ರವಾಹದ ಸುಳಿಗಳ ನಡುವೆ,
ಮಾಗಬೇಕು ಬದುಕು ಜಗದಿ
ಕಾಲದ ನಿರಂತರ ಪಯಣದೀ... 

No comments:

Post a Comment