20 March, 2023

ಮೆರೆಯಲಿ ಬದುಕು...

ತೆರೆದಿಡಬೇಕು ಮನಸಿನ ಕದವ 
ಬದುಕಿಲ್ಲಿ ನಗುವಾಗ,
ಬರೆದುಬಿಡಬೇಕು ಖುಷಿಯ ಸಾಲುಗಳ
ಬದುಕಿನ ಹಾಳೆಯ ತುಂಬಾ...

ಮರೆತುಬಿಡಬೇಕು ಎಲ್ಲಾ ಕಹಿಯ
ಮನಸಿಲ್ಲಿ ಮಗುವಾದಾಗ,
ಬದುಕು ಒಂದಿಷ್ಟು ಕುಣಿಯಬೇಕು
ಕನಸುಗಳ ರೆಕ್ಕೆಪುಕ್ಕಗಳ ಜೊತೆಗೆ...

ಬದುಕಿಲ್ಲಿ ಬಸವಳಿದು ಅತ್ತಾಗ
ಮೌನಿಯಾಗಬೇಕು ಜಗದ ನಡುವೆ,
ಒಂದಿಷ್ಟು ತಣಿಯಬೇಕು ಜೀವವೂ
ಮೌನದ ಮರೆಯ ಪೊರೆಯೊಳು...

ಮರೆತು ನಡಿಬೇಕು ಒಂದಷ್ಟು ಆಸೆಗಳ
ಕಳೆದುಕೊಳ್ಳಲು ಒಂದಿಷ್ಟು ಭಾರವನು,
ಹೊಸ ಕನಸುಗಳ ಚಪ್ಪರದ ಕೆಳಗೆ
ಮತ್ತೆ ಮತ್ತೆ ಮೆರೆಯಲಿ ಬದುಕು ತಣ್ಣಗೆ...

No comments:

Post a Comment