ಎದೆಹಾಲಲೇ ಪ್ರೀತಿಯಿತ್ತವಳು ಹೆತ್ತತಾಯಿ
ಶಾಂತಿಮಂತ್ರವ ಕಲಿಸಿದ ಮೊದಲಗುರು,
ಏತಕೆ ಬೇಕು ಬುದ್ಧ ಗಾಂಧಿಯ
ಶಾಂತಿ ಅಹಿಂಸೆಯ ತತ್ವದ ಹಂಗು.
ಹಸಿದ ಹೊಟ್ಟೆಗೆ ತುತ್ತು ನೀಡಿದ್ದು
ಅಪ್ಪನ ಬೆವರ ಹನಿ,
ಯಾತಕೆ ಬೇಕು ಹಸಿವು ನೀಗದ
ಜಾತೀಯತೆಯ ಹಂಗು.
ಪ್ರೀತಿಯನ್ನೇ ದೇವರಾಗಿಸಿಹೆನು
ಹೃದಯ ಮಂದಿರದಲ್ಲಿ,
ಕೋಟಿ ದೇವತೆಗಳ ಕರೆದು
ಅವಮಾನಿಸಲೇಕೆ ನಾನಿಲ್ಲಿ.
ಧರ್ಮ ಮಾರ್ಗದಲಿ ನಡೆಯಲು
ಸಂಸ್ಕೃತಿಯು ಜೊತೆಯಿರಲು,
ನೂರು ನಾಯಕರ ಮಾರ್ಗದರ್ಶನವಂತೆ
ಹಂಗೇತಕೆ ಬೇಕೆನಗೆ ಬಾಳಿ ಬದುಕೋಕೆ.
ಕಲ್ಲು ಬಂಡೆಯನೇ ಕರಗಿಸುವುದಂತೆ
ಈ ಜೀವನ ಪ್ರೀತಿ,
ಬರಿದಾದ ಎದೆಗಳಲಿ ಮನುಜತೆಯ ಬೆಳಗಲು
ಕ್ರಾಂತಿಯ ಹಂಗೇತಕೆ ಎನಗೆ.
No comments:
Post a Comment