ತುತ್ತು ಅನ್ನಕೆ ಪರದಾಡುವ
ಜನರ ಹಸಿವು ನೀಗಬೇಕು,
ಉಸಿರ ತುಂಬುವ ಅನ್ನಕೆ
ಬೆಳೆವ ಹೊಲವಾಗಬೇಕು.
ನೂರು ನೋವುಗಳಿಗೆ ಬಲಿಯಾಗಿಹ
ಜೀವಗಳ ಜೀವನಾಡಿಯಾಗಬೇಕು,
ಕರಗಿದ ಕನಸುಗಳಿಗೆ ಜೀವ ತುಂಬುವ
ಹೊಂಗನಸು ನಾನಾಗಬೇಕು.
ಅಜ್ಞಾನದ ಕೊಳೆ ಕಳೆಯಲು
ಸುಜ್ಞಾನದ ಬೆಳಕ ಹರಿಸಬೇಕು,
ಅಂಧಕಾರವ ದೂರಮಾಡುವ
ಪ್ರಣತಿಯ ಜ್ಯೋತಿಯಾಗಬೇಕು.
ತುಂಬಿತುಳುಕುತ್ತಿರುವ ಮೌಢ್ಯತೆಯ
ಕಸವ ಗುಡಿಸಬೇಕು,
ಮನದಂಗಳವ ಶುಚಿಯಾಗಿಸೆ
ವಿವೇಕದ ಬರಳು ನಾನಾಗಬೇಕು.
ಭಾವನೆಗಳೇ ಬರಿದಾದ ಎದೆಗಳಲಿ
ಮನುಜತೆಯ ಬೆಳಗಬೇಕು,
ಬದುಕ ರೂಪಿಸುವ ನಂಬಿಕೆಯಲಿ
ಜೀವನ ಪ್ರೀತಿ ನಾನಾಗಬೇಕು.
No comments:
Post a Comment