06 June, 2015

ನಾನು...ನನ್ನ ಕನಸು...


ಹೊಸತೊಂದು ಬದುಕಿಗೆ ಮುನ್ನುಡಿ ಬರೆಯಬೇಕು
ಓ ಕನಸುಗಳೇ ಅದಕೆ ನಿಮ್ಮ ಕಾವಲು ಇರಬೇಕು,
ಹಗಲುಕನಸುಗಳಿಗೂ ಒಂದು ಬೇಲಿಯು ಇರಬೇಕು
ಅಲ್ಲಿ ಪ್ರತಿಕ್ಷಣವೂ ಪ್ರೀತಿಯು ನಗುತಿರಬೇಕು.


ಬದುಕ ತೋಟದಲ್ಲಿ ಭಾವವದು ಅರಳುತಿರಬೇಕು
ಓ ಕನಸುಗಳೇ ನೀವದಕೆ ಸಿಂಚನವಾಗಬೇಕು,
ಮರೆತು ಹೋದ ನೆನೆಪುಗಳಿಗೂ ಬಣ್ಣ ಹಚ್ಚಬೇಕು
ಸಿಹಿ ಕನಸುಗಳು ಮತ್ತೆ ಮತ್ತೆ ಮೇಲೈಸುತಿರಬೇಕು.

ಸ್ನೇಹದ ಪಯಣದಲ್ಲಿ ಒಲುಮೆ ತುಂಬಿರಬೇಕು
ಮನಸ ಆಗಸದಲ್ಲಿ ಕನಸುಗಳು ಮಿಂಚುತಿರಬೇಕು,
ಒಲವ ಮಾಗ೯ದಲಿ ಸಣ್ಣದೊಂದು ಹಣತೆಯಾಗಬೇಕು
ಓ ಕನಸುಗಳೇ ನೀವು ಬದುಕಿಗೆ ಆಸರೆಯಾಗಬೇಕು.

ಕನಸಲೋಕದಲ್ಲಿ ನನ್ನೇ ನಾನು ಮರೆಯಬೇಕು
ಒಲವ ತೊಟ್ಟಿಲಲ್ಲಿ ನಾನು ಮಗುವಾಗಿ ಮಲಗಬೇಕು,
ಮೊಗದ ತುಂಬಾ ಮುಗ್ಥ ನಗುವು ತುಂಬಿರಬೇಕು
ಓ ಕನಸುಗಳೇ ಅದಕ್ಕೆಂದೂ ನಿಮ್ಮ ಒಲವು ಜೊತೆಗಿರಬೇಕು.

ಓ ಕನಸುಗಳೇ ನೀವೆನ್ನ ಪ್ರೀತಿಯಾಗಬೇಕು
ಒಲವ ಪಯಣದಲಿ ನಾನೆಂದೂ ಕನಸುಗಾರನಾಗಿರಬೇಕು,
ಪ್ರತಿ ಕನಸಲೂ ನಾನು ಬದುಕ ಕಾಣಬೇಕು
ಬದುಕ ಪಯಣದಲಿ ನಾನೆಂದೂ ಪ್ರೇಮಿಯಾಗಿರಬೇಕು.

No comments:

Post a Comment