06 June, 2015

ಓ ಮನಸೇ...


ನೂರು ನೆನಪ ಹೊತ್ತುತರುವೆ
ಕವಿತೆಯಾಗು ಮುದ್ದು ಮನಸೇ,
ಭಾವ ಮರೆತು ಭ್ರಮೆಗೆ ಸರಿದ ಮನಸೇ
ಪ್ರೀತಿಯಾಗು ಈ ಬದುಕಿಗೆ.


ಬತ್ತಿಹೋದ ಭಾವಗಳನು ಹುಡುಕುತಿರುವೆ
ಬರಿದಾದ ಒಡಲಲ್ಲಿ ಆಸೆಯೊಂದ ಚಿಗುರಿಸು,
ಮರೆತ ಕನಸುಗಳಿಗೆ ಜೀವ ತುಂಬಿ
ಕಾವ್ಯ ಶಿಶುವಿಗೆ ಗಭ೯ಧರಿಸು ಮನಸೇ.

ಬದುಕಿಗೊಮ್ಮೆ ಆಸರೆಯಾಗು ಮನವೇ
ಪ್ರೇಮಲೋಕವ ನಾನು ತೆರೆದಿಡುವೇ,
ಕನಸ ನೀನು ಚಿಗುರಿಸು ಮನಸೇ
ಭಾವಗಳನು ನಾನು ತೆರೆದಿಡುವೇ.

ಕಾವ್ಯವಾಗಲಿ ನಿನ್ನೊಳಗಿನ ಪ್ರೀತಿ
ಪದವಾಗುವೆ ನಾನು ನಿನ್ನೊಳಗೆ,
ಭ್ರಮೆಯ ಸರಿಸಿ ಬದುಕ ಮೆರೆಸು ಮನಸೇ
ಭಾವವಾಗಿ ನಾ ನಿನ್ನೊಳಗೆ ಬೆರೆತುಬಿಡುವೆ.

ಅಜ್ಞಾನದ ಅಂಧಕಾರವ ಮರೆಸು
ವಾಸ್ತವದ ಕನ್ನಡಿಯ ಹಿಡಿ ಮನವೇ,
ಸೋತ ಭಾವಗಳಿಗೆ ಜೀವವಾಗಬೇಕು ನಾನು
ನನ್ನೊಳಗಿನ ಪ್ರೀತಿಯ ಮೆರೆಸು ಮನಸೇ.

No comments:

Post a Comment