27 November, 2015

ಮನದ ಮಾತು....


ಬನ್ನಿ ಕನಸುಗಳೇ ಬದುಕಿನೊಳು ನೀವು
ನೂರು ಆಸೆಗಳ ಹೊತ್ತು ತನ್ನಿ,
ಅರಳಿ ಭಾವಗಳೇ ನನ್ನೆದೆಯಾ ತೋಟದಲಿ
ಮುಗುಳುನಗೆಯಾ ಸವಿ ಜೇನಾಗಿ.

ಓಡದಿರಿ ನೆನಪುಗಳೇ ಮನದ ಅಂಗಳದಿಂದ
ಬಿದ್ದು ಮಾಡಿಕೊಂಡ ಗಾಯಗಳ ತೋರಿ ಬನ್ನಿ,
ಮರೆಯಾಗದಿರು ಓ ಎನ್ನ ಮುಗ್ಧತೆಯೆ
ಜಗವ ಪ್ರೀತಿಸಲು ಬೇಕೆನಗೆ ನಿನ್ನ ಸಂಗ.

ಬತ್ತಿ ಹೋಗದಿರು ನೀನು ತುಟಿಯಂಚಿನ ನಗುವೇ
ಬಾಳಪಯಣದಿ ಎಂದೂ ನೀನೆನ್ನ ಮಗುವೇ,
ಕರಗಿ ಹೋಗದಿರು ಓ ಮನಸ ಮರೆವೇ
ವರವೆನಗೆ ನೀನಿಲ್ಲಿ ನೂರು ದ್ವಂದ್ವ ಮರೆಸೋಕೆ.

ಕುಗ್ಗದಿರು ಓ ಎನ್ನ ಮನಸೇ ಸೋಲುಗಳ ಮುಂದೆ
ಎದ್ದು ನಿಲ್ಲಬೇಕು ನಾನೆಂದು ಸ್ವಾಭಿಮಾನಿಯಾಗಿ,
ಮುಗ್ಗರಿಸದಿರಿ ಕನಸುಗಳೇ ವ್ಯಾಮೋಹದೆದುರು
ಮಂಡಿಯೂರಲಾರೆ ನಾನೆಂದು ನಾಳೆಗಳ ಮುಂದೆ.

ಖುಷಿಯ ಕನವರಿಸು ಮನಸೇ ಪ್ರತಿಕ್ಷಣವೂ ನೀನಿಲ್ಲಿ
ಬರುವ ನಾಳೆಗಳ ಸ್ವಾಗತಿಸೋದಕ್ಕೆ,
ಒಲವನ್ನೇ ನೀ ಸುರಿಸು ಓ ಹೃದಯವೇ
ಜಗದ ನಾಳೆಗಳ ಸುಂದರಗೊಳಿಸೋಕೆ.


No comments:

Post a Comment