30 September, 2018

ಉತ್ತರಿಸು ನೀ ಓ ಬ್ರಹ್ಮ...

ಹಣೆಬರಹ ಬರೆದ ಓ ಬ್ರಹ್ಮ
ನಿನಗಿಲ್ಲಿದೆ ನೂರು ಪ್ರಶ್ನೆಗಳು,
ಉತ್ತರಬೇಕಿದೆ ನಿನ್ನಿಂದ
ಬದುಕಲಿ ಯಾಕೆ ಬರೆದೆ ಗೋಜಲುಗಳನ್ನು...

ಪ್ರೀತಿಯ ಬರೆದೆ ನೀ ಬದುಕಲ್ಲಿ
ಸಂಶಯವಾ ಯಾಕೆ ಹುಟ್ಟಿಸಿದೆ,
ಸಂಬಂಧಗಳ ಇಲ್ಲಿ ಜೋಡಿಸಿದೆ
ಅಸೂಯೆಯಾ ಯಾಕೆ ನೀ ಕರುಣಿಸಿದೆ...

ನಂಬಿಕೆಯನು ನೀನಿಲ್ಲಿ ಬರೆದಿಟ್ಟೆ
ಅಪನಂಬಿಕೆಗೇಕೆ ಇಲ್ಲಿ ಜಾಗವ ಕೊಟ್ಟೆ,
ಆಸೆಗಳನ್ನೆನೋ ಕರುಣಿಸಿದೆ
ವಾಮಮಾರ್ಗಗಳನ್ನೇಕೆ ಪರಿಚಯಿಸಿದೆ...

ಸ್ನೇಹವ ಬರೆದಾ ಓ ಬ್ರಹ್ಮ
ಹಿತ ಶತ್ರುಗಳನ್ನೇಕೆ ಹುಟ್ಟಿಸಿದೇ,
ಮಿಡಿಯುವ ಮನಸ ನೀ ಕೊಟ್ಟೆ
ಪರರಿಗೆ ಆಡಲು ಜಾಗ ಯಾಕೆ ಬಿಟ್ಟೆ...

ಸೃಷ್ಟಿಯನೇನೋ ಮಾಡಿಬಿಟ್ಟೆ
ಮನಸಿನ ಮರೆಯಲಿ ಯಾಕೆ ನಿಂತುಬಿಟ್ಟೆ,
ಬದುಕಿನ ಗುರಿಯನು ಮರೆಸಿಬಿಟ್ಟು
ಮೋಕ್ಷದ ದಾರಿಯ ಯಾಕೆ ಬಚ್ಚಿಟ್ಟೆ...

No comments:

Post a Comment