30 September, 2026

ಅರಳಲಿ ನಾಳೆಗಳು...

ಸುಮ್ನೆ ಸುಮ್ನೆ ನಗುವಾಗಲೆಲ್ಲ 
ನಿನ್ನ ನೆನಪೇ ಕಾಡಿದೆ ಬದುಕೇ,
ಜೊತೆಗೆ ಇದ್ದರೂ ಇರಲಾರದಂತೆ 
ಕಾಲ ಇಲ್ಲಿ ದೂರ ದೂರ ಸೆಳೆದಿದೆ...

ಬದುಕು ಬದಲಾಗಲಿಲ್ಲ ಮನಸೇ
ನೋಟ ಬದಲಾಯಿತಷ್ಟೇ,
ಹಳೆಯ ಗಾಯವ ಮರೆತು 
ಹೊಸತೊಂದಕೆ ಹಾತೊರೆಯುವಂತೆ...

ಬದುಕು ಭರವಸೆಯ ಹಾಡು 
ನೂರು ಗೀರುಗಳ ನಡುವೆ,
ನಲಿವಿರಲಿ ನೋವಿರಲಿ 
ನೀನು ಗುನುಗಲೇ ಬೇಕು ಮನಸೇ...

ಹೊಗಳಿಕೆಗೆ ಬದುಕು ಬದಲಾಗೋದಿಲ್ಲ
ನಿಂದಿಸಿದರು ಬೇಜಾರಿಲ್ಲ ಇಲ್ಲಿ, 
ಮುಂದಡಿಯಿಡುವ ಹೆಜ್ಜೆಯಿರೆ ಸಾಕು 
ನಾಳೆಗಳೆಲ್ಲ ನಗುವವು ನೋಡು...

21 September, 2026

ಅಲೆಮಾರಿ...

ಕೊನೆಮೊದಲಿಲ್ಲದ ಬದುಕಿನ ಬಯಲೊಳಗೆ 
ಸಾವಿರ ನೆನಪುಗಳ ಭಾರವ ಹೊತ್ತು,
ಕಾಣದ ನಾಳೆಗಳ ಹುಡುಕುತ್ತಾ 
ನಿಲ್ಲದ ಸಮಯವ ಸವೆಸುವ ಸೋಮಾರಿ...

ನೂರು ನೋವುಗಳ ಜೊತೆಗೆ ಗುದ್ದಾಡಿ 
ಒಂದು ಖುಷಿಯಾ ಬೆನ್ನೇರಿ,
ತಿರುಗೋ ಈ ಭುವಿಯಲ್ಲಿ 
ಇರುವನ್ನೇ ಮರೆತ ಸುತ್ತಾಟ...

ಅಳುವ ನುಂಗಿ ನಗುವ ಬೀರುತ 
ಮೈಮರೆತು ಬದುಕ ಬಯಲೊಳಗೆ,
ಕನಸ ಮರೆತು ಏಕಾಂಗಿಯಂತೆ 
ಬದುಕು ಇಲ್ಲಿ ಅಲೆಮಾರಿ...

ಮೂರು ದಿನದ ಯಾತ್ರೆಯಲಿ 
ನೂರು ತರದ ಮುಖವಾಡ,
ಕಾಮನಬಿಲ್ಲನೇ ನಾಚಿಸುವ 
ಬಣ್ಣಗಳ ಓಕುಳಿಯಾಟ...