30 April, 2025

ಮಾಯಾಕನ್ನಡಿ...

ಮನಸೆಂಬ ಕನ್ನಡಿಯೊಳು
ಬದುಕು ನಗಬಹುದೇ,
ಭಾವಗಳ ಅಲೆಯಲ್ಲಿ
ತನ್ನೆಲ್ಲಾ ಅಳುಕುಗಳ ದೂರ ಸರಿಸಿ...

ನೂರು ನೋವುಗಳ ಮರೆತು
ಬದುಕಿಲ್ಲಿ ನಗಲು,
ಮನಸು ನಿಲ್ಲುವುದೇ
ಹೊಸ ಕನಸ ಜೊತೆಗೆ...

ಭಾವದೆಲೆಯ ಮೇಲೆ
ಬದುಕಿಲ್ಲಿ ತೇಲುತಿರೆ,
ಮನಸಿನೊಳಗೆ ನೂರು ಪ್ರತಿಬಿಂಬ
ಒಡೆದ ಕನ್ನಡಿಯಲಿರುವಂತೆ...

ಯಾರು ತನ್ನವರೋ
ಯಾರು ಹಿತವರೋ ಇಲ್ಲಿ,
ಸಾಗಬೇಕು ಕನಸುಗಳ ಜೊತೆಗೆ
ಬದುಕು ಮಂದಾರವಾಗಿರಲು...

21 April, 2025

ನನ್ನೆದೆಯಾ ಹಾಡು...

ಬದುಕು ಅನ್ನೋದು ಪೂರ್ವದ
ಉದಯ ಸೂರ್ಯನಲ್ಲ,
ಭರವಸೆ ಅನ್ನೋದು ಇಲ್ಲಿ 
ಪಶ್ಚಿಮದ ಕಡಲೂ ಅಲ್ಲ...

ಕನಸು ಕಾಣುವ ಜೀವಕೆ
ಬದುಕುವುದೇ ಒಂದು ಸಂಭ್ರಮ,
ನಗುವ ಮನಸಿರೋ ಜೀವಕೆ
ಬದುಕು ಅನ್ನೋದು ಹಬ್ಬವೇ...

ಮರುಗಬೇಕು ಮರೆವಿನೊಳು
ಅರಳಬೇಕು ಲೋಕದೊಳಗೆ,
ಜೀಕಬೇಕು ಕಾಲದ ಉಯ್ಯಾಲೆಯಲಿ
ಎದೆಯ ತುಂಬಿದ ಭಾವದ ಜೊತೆಗೆ...

ಕರಗಬೇಕು ಬದುಕು ಪ್ರೀತಿಯಾಗಲು
ಕಾಯಬೇಕು ಮನಸು ಹದವಾಗಲೂ,
ಬದುಕು ಇಲ್ಲಿ ಕೇಳಿ ಪಡೆದ ವರವಲ್ಲ
ಕರ್ಮದ ಜೊತೆಗಿನ ಶಾಪವೂ ಅಲ್ಲ...

31 March, 2025

ಅರಮನೆ...

ಹಳೆಯ ಮನೆಯ ಕೆಡವಿ 
ಹೊಸತೊಂದು ಗೂಡನು ಮಾಡೇ,
ಹೆಮ್ಮೆಯಪಡುತಲಿರಳು ಮನದಿ
ಹಳೆಯ ನೆನಪುಗಳು ಬಿಕ್ಕಿದವಿಲ್ಲಿ...

ಹಳೆಯ ಗೋಡೆಗಳ ಒಡೆದು
ಒಡಲ ಬಂಧಗಳ ತೊಡೆದು,
ಹೊಸತನದ ಗರ್ವದಲಿ ಬೀಗುತಿರಲು
ಭಾವಗಳೇ ಖಾಲಿ ಖಾಲಿ ಮನಸಿನಂಗಳದಿ...

ಹೊಸತು ಎಲ್ಲವನು ಜೋಡಿಸಿ
ಹಳೆಯದೆಲ್ಲವನು ಮೂಲೆಗೆ ತಳ್ಳಿ,
ಹಳೆಯ ಚಿತ್ರಗಳಿಗೆಲ್ಲ ಗೆದ್ದಲು ಹಿಡಿಯೇ
ನೆನಪುಗಳ ಬೇರುಗಳು ಅಲುಗಾಡಿದಂತೆ...

ನಾನೆಂಬ ಭಾವದೊಳು ಇಲ್ಲಿ
ಹೊಸತನವ ಹುಡುಕಿ ಲೋಕದೊಳು,
ನೆನಪುಗಳ ಬೇರ ಕಿತ್ತುಹಾಕಿ
ಬದುಕು ಅಳುತಿಹುದು ಒಂಟಿಯಾಗಿ...

07 March, 2025

ಮಾಯಾವಿ...

ವಿಧಿಯೆಂಬ ಸಾಹೇಬ ನೀನೆಷ್ಟು ಒಗಟು 
ಅಳಲಾಗದೆ ನಗಲಾಗದೆ ಬದುಕಿಲ್ಲಿ ಬೆರಗು,
ಒಂದೊಮ್ಮೆ ಅನಿಸುವುದು ನೀನೆಷ್ಟು ಕ್ರೂರಿ 
ಮತ್ತೊಮ್ಮೆ ಅನಿಸುವುದು ನೀ ಪೂರ್ವದ ನಂಟೇ...

ಜಗವ ನಡೆಸುವ ನೀತಿ ನೀನಂತೆ ವಿಧಿಯೇ 
ಸೃಷ್ಟಿಯು ಹೊರತಲ್ಲವಂತೆ ನಿನ್ನ ಚೌಕಟ್ಟಿನಿಂದ,
ಇರಬಹುದೇ ನಿನ್ನನ್ನು ಮೀರಿದಾ ಬದುಕು 
ಗೆಲುವಿನಲು ಸೋಲಿನಲು ನಗುವಂತ ಮನಸು...

ಕಣ್ಣಿಗೆ ಕಂಡರೊಮ್ಮೆ  ಕೇಳುವುದಿತ್ತು ನಿನ್ನ ಬಳಿ 
ನಿನ್ನ ನಿಯಮದಲ್ಲಿ ಏನೇನಿದೆ ಹೇಳು,
ಮೊದಲೇ ಎಲ್ಲವನು ತಿಳಿಯುವ ಹಂಬಲವಲ್ಲ 
ಮನಸು ಹಗುರವಾಗುತ್ತಿತ್ತು ಸತ್ಯವನು ಅರಿತು...

ಯಾರು ಕಂಡರೋ ನಿನ್ನ ಎಂದೋ ಜಗದಿ 
ವಿಧಿಯೆಂಬ ಹೆಸರ ನಿನಗಿತ್ತವರು ಯಾರೋ,
ಭಯಪಡಬೇಕೋ ನೀ ಮಾಯವಿಯೆಂದು 
ನಗಬೇಕೋ ಹೇಳು ನೀನ್ಯಾರೆಂದು ತಿಳಿಯದೇ...

27 February, 2025

ಹಾರುತ ದೂರ...

ಅಳಿದುಳಿದ ಭಾವಗಳು ಸೇರಿ 
ಮನಸು ತುಂಬಿದಂತೆ,
ಕರಗಿಹೋದ ಕನಸುಗಳೆಲ್ಲ ಮರಳಲು 
ಬದುಕೆಲ್ಲಾ ಬೆಳದಿಂಗಳು...

ಪ್ರೀತಿ ಜೊತೆ ಜೀಕುವ ಮನಸಿಗೆ 
ನೆನಪುಗಳೇ ಮಂದಾರವೂ,
ಒಲವ ಲೋಕದೋಳು ಪಯಣಕೆ 
ಮನಸಿಲ್ಲಿ ಶೃಂಗಾರವೂ...

ಗೂಡ ಕಟ್ಟುವ ಬಯಕೆ 
ಮನಸ ಮೂಲೆಯಲೊಮ್ಮೆ,
ರೆಕ್ಕೆ ಬಡಿಯುತ ಬೆಳೆಯಲಲ್ಲಿ 
ಬದುಕಲಿ ಭಾವದ ಹಕ್ಕಿ ...

ಬದುಕಿಲ್ಲಿ ಮೂರು ದಿನ 
ನೂರು ನೋವುಗಳ ನಡುವೆ,
ಸಂಭ್ರಮಿಸಬೇಕಿಲ್ಲಿ ಇರುವಷ್ಟು ಹೊತ್ತು 
ಬದುಕ ಬಾನಿನಲಿ ರೆಕ್ಕೆ ಬಿಚ್ಚಿ...

15 February, 2025

ಸೂತ್ರ...

ಬೆಳಗೋ ದೀಪವೂ ಇಲ್ಲಿ 
ಅದು ಪ್ರೀತಿ ತಾನೇ ಬದುಕಲಿ,
ಉಸಿರಾಡೋ ಗಾಳಿಯಂತೆ
ನಂಬಿಕೆಯು ಈ ಬದುಕಿಗೆ...

ಪ್ರೀತಿ ಇರದ ಬಾಳು ಉಂಟೇ 
ಜಗದ ಈ ಅಂಗಳದಲಿ,
ನಂಬಿಕೆಯಿರದ ಸಂಬಂಧವಿದೆಯೇ 
ಲೋಕದಾ ಈ ಯಾತ್ರೆಯಲಿ...

ಪ್ರೀತಿಯಿಲ್ಲಿ ಸೂತ್ರದಂತೆ 
ನಂಬಿಕೆಯು ನೀತಿಯಂತೆ,
ನೀತಿಯಿರದ ಸೂತ್ರವೆಲ್ಲಿ 
ಸೂತ್ರವಿರದೆ ನೀತಿಯಿಲ್ಲ...

ಒಂದು ಹುಟ್ಟು ಒಂದು ಸಾವು 
ನಡುವೆ ಉಂಟು ನೂರು ಗೋಳು,
ಬಂಧ ಕಟ್ಟಿ ಬಂಧ ಕಳೆವ 
ನಡುವೆಯಿಲ್ಲಿ ಬದುಕು ನೋಡು...

31 January, 2025

ಮೆರವಣಿಗೆ...

ಈ ಬದುಕಿನ ಪಯಣದ ತುಂಬೆಲ್ಲಾ 
ನೂರಾರು ತಿರುವು ಇದೆಯಲ್ಲಾ,
ನಗುನಗುತಾ ಸಾಗುತ ಇರುವಾಗ 
ನಿಲ್ದಾಣವೇ ಮರೆತಂತಿದೆಯಲ್ಲಾ...

ಹೊಸತೊಂದು ಲೋಕವೇ ತೆರೆದಂತೆ 
ಬದುಕು ಅಚ್ಚರಿಯ ಕಂಡಂತೆ,
ಆಸೆಗಳ ಜೊತೆಗಿನ ಈ ಪಯಣ 
ಸಾಗುವ ದಾರಿಯ ಮರೆಸಿದೆಯಲ್ಲ...

ಮನಸಿನ ಹಾಳೆಗಳ ತುಂಬೆಲ್ಲಾ 
ಭಾವಗಳ ಚಿತ್ತಾರ ಬರೆದಂತೆ,
ಕನಸುಗಳ ಹೊತ್ತ ಕಂಗಳಿಗೂ 
ಬದುಕು ತೋರಣ ಕಟ್ಟಿದೆಯಲ್ಲ...

ಕಾಲವು ಮಗ್ಗುಲು ಬದಲಿಸಿದಂತೆಲ್ಲ 
ಹೊಸತೊಂದು ಪರೀಕ್ಷೆಯು ಇದೆಯಲ್ಲ,
ಹೊಸತಾದ ನಿರೀಕ್ಷೆಯ ಜೊತೆಯಿಲ್ಲಿ 
ನಗುವಿನ ಮೆರವಣಿಗೆ ನಡೆದಿದೆಯಲ್ಲ...