25 August, 2014

ಕರುಳಿನ ಕೂಗು...



ಅರಳುವ ಹೂಗಳು ನಾವು
ಕೀಳದಿರಿ ನೀವು ಮೊಗ್ಗುಗಳ,
ಸೃಷ್ಟಿಗೆ ಅರ್ಥವೇ ನಾವು
ಕೆಡಿಸದಿರಿ ನಮ್ಮಯ ನಾಳೆಗಳ.

ಪ್ರೀತಿಗೆ ಕಂಗಳು ನಾವೇ
ಮುಚ್ಚದಿರಿ ಈ ದೃಷ್ಟಿಯನು,
ಮಮತೆಯ ಮಡಿಲು ನಮ್ಮದು
ಬರಿದಾಗಿಸದಿರಿ ನೀವು ಸ್ವಾರ್ಥದಲಿ.

ಜೀವನ ಪಯಣಕೆ ಹೆಗಲಾಗುವೆವು
ಬರಿದಾಗಿಸದಿರಿ ನಮ್ಮಯ ಬದುಕನ್ನು,
ನಮಗೂ ನೂರು ಕನಸುಗಳಿವೆ
ಕಿತ್ತುಕೊಳ್ಳದಿರಿ ನೀವೆಮ್ಮಯ ಉಸಿರನ್ನು.

ಮಾಡದಿರಿ ನಮ್ಮಲಿ ಭೇದವನು
ನಮಗೂ ಬದುಕುವ ಹಕ್ಕು ಇದೆ,
ಸೌಂದರ್ಯವು ನಮಗೆ ವರದಂತೆ
ಮುಗಿಸದಿರಿ ನೀವದನು ಶಾಪದಲಿ.

ಪೂಜೆಯ ಮಾಡಿಹ ಕೈಗಳಲಿ
ಕೊರಳಿಗೆ ಪಾಶವ ಬಿಗಿಯದಿರಿ,
ಜರಿಯದಿರಿ ನೀವು ಹೆಣ್ಣೆಂದು
ಮರೆಯದಿರಿ ಬಾಳಿನ ಕಣ್ಣನ್ನೂ.

ಪೂಜೆಯು ನಮಗೆ ಬೇಕಿಲ್ಲಾ
ಪ್ರೀತಿಯು ಮಾತ್ರವೇ ಸಾಕೆಮಗೆ,
ಪ್ರತಿ ಹೆಣ್ಣಿನ ಮನಸಿನ ಕೂಗು ಇದು
ಅರಿತುಕೊಳ್ಳುವಿರೆಂಬ ಆಶೆಯಿದೆ.

2 comments:

  1. ಯಾವ ಕಾಲಕೂ ಕ್ಷಮಾರ್ಹವಲ್ಲದ ಅಮಾನವೀಯ ಕೃತ್ಯಗಳಿಗೆ ಕಡಿವಾಣವು ಎಂದು ಬೀಳುವುದೋ? ಹೆಣ್ಣು ಕಣ್ಣೀರಿಟ್ಟರೆ ಉಳಿಗಾಲವಿದೆಯೇ ಬಾಳ್ಮೆಗೂ?

    ReplyDelete