28 December, 2013

*ಮಾತು-ಮೌನ*



ನನ್ನೊಳಗಿನ
ಭಾವ ನೀನು
ಬಂಧಿಯಾದಾಗ
ನಾ
ಪ್ರೇಮಿಯಾದೆನು,
ನನ್ನೊಳಗಿನ
ಮೌನ ನೀನು
ಮಾತಾದಾಗ
ವಿರಹಿ ನಾನು
ಕವಿಯಾದೆನು.

**********

ಪ್ರತಿ ಮಾತಲ್ಲೂ
ಪ್ರೀತಿ ಹುಡುಕುವ
ನಾನು,
ನಿನ್ನ ಮೌನವ
ಅರ್ಥೈಸಿಕೊಂಡಿದ್ದರೆ
ಅದೆಷ್ಟೋ
ಶೃಂಗಾರ ಕಾವ್ಯಗಳ
ಸೃಷ್ಟಿಸಬಹುದಿತ್ತು.

ನನ್ನಾಕೆ ಬರುತಾಳೆ...



ನೀಲ ಬಾನಿನ ಮೇಘಗಳೇ
ಸಾಲಾಗಿ ನಿಂತು ಉಪಕರಿಸಿ,
ನನ್ನಾಕೆ ಬರುತಾಳೆ
ಪ್ರೀತಿ ಮಿಂಚಾಗಿ.

ಚಿಲಿಪಿಲಿಯ ಉಲಿಯುವ ಬಾನಾಡಿಗಳೇ
ಸೇರಿ ಹಾಡಿರಿ ನೀವೆಲ್ಲಾ,
ನನ್ನಾಕೆ ಬರುತಿಹಳು
ಜೀವನ ಶೃತಿಯಾಗಿ.

ಗರಿಯ ಬಿಚ್ಚಿ ಕುಣಿಯಿರಿ
ಓ ನವಿಲುಗಳೇ,
ನನ್ನಾಕೆ ಬರುತಾಳೆ
ಪ್ರೀತಿಯ ಕಾಮನಬಿಲ್ಲಾಗಿ.

ತಲೆಯದೂಗುತಾ ನಲಿದಾಡಿ
ಹಚ್ಚಹಸುರಿನಾ ಪೈರುಗಳೇ,
ನನ್ನವಳು ತರುತಾಳೆ
ಪ್ರೀತಿಯ ಸೋನೆ ಮಳೆ.

ಅರಳಿ ನಗುವಾ ಓ ಸುಮಗಳೇ
ಪರಿಮಳ ಚೆಲ್ಲಿ ಹರುಷದಲಿ,
ಗೆಳತಿ ಬರುತಾಳೆ
ಜೀವನ ನಗುವಾಗಿ...

15 December, 2013

ಮನಸೇ ನೀ ಹೀಗೇಕೆ...



ಬಣ್ಣವಿಲ್ಲದ ಆಕಾರವಿಲ್ಲದ
ಓ ಮನಸೇ,
ನಿನ್ನ ಭಾವನೆಗಳಿಗೆ
ಬಣ್ಣ ಹಚ್ಚುವೆಯೇಕೆ.

ತೂಕವಿಲ್ಲದ ಬಿಂಬ
ನೀನಾಗಿರಲು
ಮೇಲು - ಕೀಳಿನ
ತಕ್ಕಡಿ ಇಡುವುದು ಸರಿಯೇ.

ಎಲ್ಲರಲೂ ಪ್ರೀತಿಯ
ಹುಡುಕುವ ನಿನಗೆ
ಜಾತಿ ಧರ್ಮದ
ಕೋಟೆಯ ಹಂಬಲವೇಕೆ.

ವಿಶ್ವಾಸವೇ ಬದುಕ
ತಳಹದಿಯಾಗಿರಲು
ರಾಗ ದ್ವೇಷಗಳ
ಈ ಸರಪಳಿಯೇಕೆ.

**ಅಪ್ಪ ಅಮ್ಮ**



ಬರೆಯಲಾರೆ ನಾ
ಅಪ್ಪ ಅಮ್ಮನ ಹೆಸರಲ್ಲೊಂದು ಕವಿತೆ,
ಮನಸಲೊಂದು ಗುಡಿಯ
ಕಟ್ಟಿಹೆನು ಅವರಿಗೆಂದೇ ನಾನು.

ಹೊಗಳಲಾರೆ ಆ ನನ್ನ
ಆರಾಧ್ಯ ದೇವರುಗಳನು,
ತೆಗಳಲಂತು ಯೋಗ್ಯನಲ್ಲ ನಾ
ಆ ಪ್ರೀತಿ ದೇವತೆಗಳನು.

ಅವರಿಂದ ಪಡೆದ ಬಾಳಿದು
ಬೆಳಗುತಿದೆ ಅವರುಗಳ ಪುಣ್ಯಕರ್ಮದಿಂದ,
ಇನ್ನೆಂತು ಬಣ್ಣಿಸಲಿ ನಾ
ನನ್ನ ನಿಜ ದೈವಗಳನು.

**ಒಲವ ಯಾತ್ರೆ**



ನನ್ನ
ಕನಸುಗಳು
ಶುರುವಾಗುವುದೇ
ನಿನ್ನ
ನೆನಪುಗಳ
ಜಾತ್ರೆಯಲಿ,
ಕಳೆದು ಹೋದೇನೆಂಬ
ಭಯವು
ನನಗಿಲ್ಲ
ಈ ಒಲವ
ಯಾತ್ರೆಯಲಿ.

**********

ನೀಲಾಕಾಶದಿ
ಹೊಳೆವ
ಚಂದಿರನಲ್ಲೂ ಕಂಡೆ
ನಿನ್ನ
ತುಂಟ ನಗೆಯ
ಅವನಿಗಿಹುದು
ಅಮವಾಸ್ಯೆಯ ನಂಟು,
ಹುಡುಗಿ
ನನ್ನ ನಿನ್ನ
ಪ್ರೀತಿಗೆ
ಆವರಿಸದಿರಲಿ
ಅನುಮಾನದ
ಕತ್ತಲೆಯ ನಂಟು.

ಬಾಳ ಹಾದಿಯಲಿ...



ಮೌನಿಯಾಗಲು ಹೊರಟು
ಬೆರೆಯುವುದ ಮರೆತೆ,
ಪದಗಳ ಮರೆತು
ಭಾವವಾಗಲು ಹೊರಟೆ.

ಕನಸುಗಳವು ಮರೆಯಾಗಲಿಲ್ಲ
ನೆನಪುಗಳ ಹಂಗನ್ನಷ್ಟೆ ತೊರೆದೆ,
ಭಾವನೆಗಳ ಸರಿಗಮದೊಳಗೆ
ಸಿಹಿ ಜೇನಾಗ ಹೊರಟೆ.

ಸ್ನೇಹಜೀವಿಯಾದೆ
ಅಂತರಂಗದ ಪೊರೆಯ ಕಳಚಿ,
ಪ್ರೇಮಿಯಾದೆನು ನಾ
ನಾನೆಂಬ ಅಂಹಕಾರವ ತೊರೆದು.

ಬರೆಯಲಾರೆ ಖುಷಿಯ
ಬಿಡಿಸಲಾರೆ ನೋವಿನ ರೇಖೆ,
ನಗುವ ಹೂವೊಂದ ಅರಳಿಸುವಾಸೆ
ನನಗೆ ನೋವೆಂಬ ಪುಟದಲ್ಲೂ.

ಮನಗಳ ನಡುವಿನ
ಸೇತು ನಾನಾಗುವ ಆಸೆ,
ಕವಿಯಾಗಲಾರೆ ನಾನೆಂದು
ಮಹಾಕಾವ್ಯವಾಗಬೇಕಿದೆ ನಾನಿಂದು.

16 November, 2013

ನನ್ನೊಳಗಿನ ನಿನಗೆ...



ನಿನ್ನ
ನೆನಪುಗಳು
ಯಾಕೋ
ದುಬಾರಿಯಾಗಿವೆ
ಇತ್ತೀಚೆಗೆ,
ಪ್ರತಿ ಇರುಳಲು
ನಿದ್ದೆಯ
ಮರೆತು
ಬೆಲೆ ತೆರಬೇಕಾಗಿದೆ
ನಾನು.

**********

ಬೆರೆಯುವುದ
ಮರೆತರೂ
ಬರೆಯುವುದ
ಮರೆಯಲಾರೆ,
ಮನದ
ಭಾವ
ನೀನಾಗಿರುವವರೆಗೆ.

**********

ನಿನ್ನ
ಮೆಚ್ಚಿಸಲೆಂದೇ
ಪದಗಳ
ಜೋಡಿಸಿದೆ,
ಮರೆತಿದ್ದೆ
ನೀನೇ
ಸುಂದರ
ಪ್ರೇಮ ಕಾವ್ಯವೆಂದು.

ದೀಪಾವಳಿ



ದೀಪಾವಳಿಯ ಶುಭಾಶಯಗಳೊಂದಿಗೆ...

ನನ್ನೊಳಗಿನ
ನಾನು
ದೂರಾದ
ದಿನವದು
ನನಗೆ
ಬಲಿಪಾಡ್ಯಮಿ,

ನೂರು ಚಿಂತೆಯಿದ್ದರೂ
ಸದಾ ನಗುವ
ಮನಸು
ಜೊತೆಯಲಿದ್ದು
ದಾರಿ ತೋರುತಿರಲು
ನನಗದುವೆ
ದೀಪಾವಳಿ.

ಎದೆಯೊಳಗಿನ ಕಲರವ...



ಮತ್ತೇರಿಸುವ
ಮುತ್ತು ಬೇಕಿಲ್ಲ
ಹುಡುಗಿ,
ನಿನ್ನ
ಮುತ್ತಿನಂಥ
ನಗುವೊಂದೇ
ಸಾಕು
ನಾ
ತನ್ಮಯನಾಗಲು.

**********

ನೆನಪುಗಳ
ಹರಾಜಿಗಿಟ್ಟಿರುವೆ
ಗೆಳತಿ
ಭಾವನೆಗಳ
ಸಂತೆಯಲಿ,
ಬಿಕರಿಯಾಗುತ್ತಿಲ್ಲ
ನೀ
ಜೊತೆಯಿರದ
ಕನಸುಗಳು.

**********

ಸುಂದರ ನಾಳೆಗಳಿಗೆ
ನೀ
ಜೊತೆ ನೀಡುವೆಯಾದರೆ
ನನ್ನೆಲ್ಲಾ ಖುಷಿಯ
ನಿನಗೆ
ಬರೆದಿಡುವೆ
ಗೆಳತಿ ,
ನನ್ನ
ಕನಸ ಕಾವಲಿಡುವೆ.

21 October, 2013

ಕನಸಿಗಾಗಿ...




** ದೀಪ **

ಇರುಳಲ್ಲಿ
ಕನಸುಗಳ
ದೀಪವಿರಲು
ಕಂಗಳಿಗೆ
ಹಗಲಲ್ಲೆ
ಕಳೆದುಹೋದೆನು
ನಾ - ನಿನ್ನ
ನೆನಪುಗಳ
ಸುಳಿಯೊಳಗೆ...

**********

** ಕನವರಿಕೆ **

ನಿನ್ನ
ನೆನಪ
ಕನವರಿಕೆ
ಪ್ರತಿ ಇರುಳನು
ಹಗಲು
ಮಾಡಿದೆ
ಹುಡುಗಿ,
ನಿದಿರಾದೇವಿಯನೆ
ವಂಚಿಸುತಾ...

**ಕಾದಂಬರಿ**



ಓದುವ ಗೀಳು
ನನಗಿಲ್ಲ ಗೆಳತಿ
ಓದಿದಷ್ಟು ಮುಗಿಯದ
ಕಾದಂಬರಿ
ನೀನೇ ಇರುವಾಗ
ಇನ್ನೇನ ಓದಲಿ
ನಾನು.

**********

ನನ್ನ
ಕನಸಿಗೆ
ಸ್ಪೂರ್ತಿಯಾಗಿ
ಕಾವ್ಯವಾದೆ,
ಮೌನದ
ಮೊರೆಹೊಕ್ಕು
ಕಾದಂಬರಿ
ಯಾಕದೆ
ಹೇಳು ಹುಡುಗಿ.

ಖುಷಿಯಾಗಿದೆ ಯಾಕೋ...



ಮರೆತು ಹೋದ ಪದಗಳವು
ಮತ್ತೆ ಎದೆಯ ಸೇರಿವೆ,
ಹೊಸ ಕನಸಿನ ಹೊಸತನಕೆ
ಆಸರೆಯನು ನೀಡಿವೆ.

ಬರಿದಾದ ಭಾವವದು
ಮತ್ತೆ ತುಂಬಿ ತುಳುಕಿದೆ,
ಹೊಸ ಆಸೆಯ ಹೊಸತನವು
ಮತ್ತೆ ತಾನು ಚಿಗುರಿದೆ.

ನಾಳೆಯೇನು ಎಂಬ ಚಿಂತೆ
ಇಂದಿನಲ್ಲಿ ಕರಗಿದೆ,
ನವ ಚೈತನ್ಯದ ನಗುವಿಂದು
ತುಟಿಯ ಅಂಚಲಿ ಮಿನುಗಿದೆ.

ನಗುತಿರುವ ಮನಸೀಗ
ತನ್ನ ತಾನೇ ಮರೆತಿದೆ,
ಕನಸೊಂದ ಕಟ್ಟುವ ಹುರುಪಲಿ
ಹಾರೋ ಚಿಟ್ಟೆಯಾಗಿ ಮೆರೆದಿದೆ.

09 September, 2013

ದೂರಾದ ಹುಡುಗಿಗೆ...



ಸತ್ತು ಗೋರಿ ಸೇರಿದ
ಭಾವನೆಗಳಿಗೆಲ್ಲಾ
ಜೀವ ಬರುವುದಾದರೆ,
ನಾನು
ಮತ್ತೆ
ಪ್ರೀತಿಸಬೇಕು
ನಿನ್ನನೇ...

**********

ನೀನೆನ್ನ ಮರೆತರೂ
ಮರೆತಿರಬಹುದು,
ಅಳಿಸಲಾರದೆ
ತೊಳಲಾಡುತಿರುವೆ
ಹುಡುಗಿ
ನೀ
ನನ್ನೆದೆಯಲಿ
ಗೀಚಿರುವ ಒಲವಿನೋಲೆಯ.

**********

ನೀ ಇರದಿದ್ದರೇನಂತೆ
ನಾನೆಂದೂ ಪ್ರೇಮಿಯೇ
ನಿನ್ನ ನೆನಪಿಗಾಗಿ ಅಲ್ಲ
ಪ್ರೀತಿಗಾಗಿಯೂ ಅಲ್ಲ,
ನನ್ನ ಕನಸಿಗಾಗಿ
ನಾಳೆಯ ಸುಂದರ
ಬದುಕಿಗಾಗಿ.

ನಗುವ ಓ ಮನಸೇ...



ನೀ ನಗುವುದ
ಮರೆತ ಮೇಲೆ
ಭಾವವದು
ತುಂಬಲೇ ಇಲ್ಲ,
ನನ್ನ ಪದಗಳವು
ಕವಿತೆಯಾಗಲೇ
ಇಲ್ಲ.

*********

ಮೌನಿಯಾದರೂ
ಸರಿಯೆ
ಕಿರುನಗೆಯೊಂದಿರಲಿ
ಸದಾ...
ನನ್ನ ಕನಸುಗಳು
ಕರಗದಂತೆ,
ಈ ಉಸಿರ
ಮರೆಯದಂತೆ
ಬಾಳ ಪಯಣದಲಿ.

ಮನಸ ಹಾಳೆಯಲಿ...


ಒಲವ ಹುಡುಕಾಟದಿ
ಮನಸು ಸೋತಿದೆ,
ನಿನ್ನ
ನಗುವ ಸಿಂಚನ
ಬೇಕಿದೆ ಹುಡುಗಿ
ಹೊಸ ಕನಸೊಂದು
ಚಿಗುರಲು.

*********

ಒಂಟಿ ಪಯಣಕೆ
ಜೊತೆಯಾದ
ನೆನಪುಗಳಿಗೂ
ವಿದಾಯ ಹೇಳಿರುವೆ
ಹುಡುಗಿ,
ಬಾಳ ದಾರಿಯಲಿ
ನೀನೇ
ಜೊತೆಯಿರಲು
ನೆನಪುಗಳ
ಹಂಗೇಕೆ
ಎನಗೆ...

15 August, 2013

ತಾಯಿ...



*ತಾಯಿ ಭಾರತಿಯ ಚರಣ ಕಮಲಗಳಿಗೆ*

ನವ ಮಾಸ ಹೊತ್ತು ಭುವಿಗೆ
ತಂದವಳು ನನ್ನ ಹೆತ್ತ ತಾಯಿ,
ಹುಟ್ಟಿಂದ ಉಸಿರ ಕೊನೆಯವರೆಗೂ
ಹೊತ್ತವಳು ಮಾತ್ರ ನೀನೇ ತಾಯಿ.

ಎದೆ ಹಾಲು ಕುಡಿಸಿ ಬೆಳೆಸಿದಾಕೆ
ನನ್ನ ಹೆತ್ತ ತಾಯಿ,
ಗಂಗೆಯನ್ನೇ ಎದೆ ಹಾಲು ಮಾಡಿ
ಕುಡಿಸಿ ಬೆಳೆಸಿದಾಕೆ ನೀನು ತಾಯಿ.

ನಿನ್ನ ಒಡಲನ್ನು ಮೆಟ್ಟಿ
ಬೆಳೆಯುತ್ತಾ ನಿಂತೆ ನಾನು,
ಪ್ರೀತಿಯಿಂದಲೇ ಸಲಹಿದೆ ನೀನು
ಮಡಿಲನ್ನೇ ಗುಡಿಯ ಮಾಡಿ.

ಉಸಿರು ನೀಡಿ ಹಸಿರು ನೀಡಿ
ಕಾಪಾಡಿದೆ ಪುಣ್ಯವತಿ ನೀನು,
ಹೆತ್ತವ್ವನ ಜೊತೆ ಹೊತ್ತವ್ವ ನೀನು
ತೀರಿಸಲೆಂತು ನಾ ನಿನ್ನಯ ಋಣವ ಹೇಳು ನೀನು.

ಪ್ರೀತಿಧಾರೆಯೆರೆದು ಬೆಳೆಸಿದಾಕೆ
ನನ್ನ ಹೆತ್ತ ತಾಯಿ,
ಸಂಸ್ಕೃತಿಯನೇ ಧಾರೆಯೆರೆದು
ಬೆಳೆಸಿದಾಕೆ ಹೊತ್ತವ್ವ ನೀನು.

ಈ ದೇಹ ನಿನ್ನದು,ಈ ಉಸಿರು ನಿನ್ನದು
ಎಂದೆಂದೂ ನಾನು ನಿನ್ನ ಮಗನೂ,
ತಾಯೇ ನಿನ್ನಯ ಮಾನರಕ್ಷಣೆಗೆ
ಮೀಸಲಿಡುವೆನು ಪ್ರಾಣ ನಾನೆಂದಿಗೂ.

ಮಗುವಾಗಿ ನಲಿದೆ ಮಗನಾಗಿ ಬೆಳೆದೆ
ನಿನ್ನೆದೆಯಾ ತೋಟದಲ್ಲಿ,
ಮತ್ತೆ ಮತ್ತೆ ಹುಟ್ಟಿ ಬರಬೇಕು ನಾನು
ನಿನ್ನಯ ಸೇವೆಗೈಯುವಾ ಭಾಗ್ಯಕ್ಕಾಗಿ.

ನಿನ್ನೆ ನಾಳೆಗಳ ನಡುವೆ...



ನಿನ್ನೆಯ ನೆನಪುಗಳ
ಎರವಲು ಪಡೆದು
ಮನಸಲೊಂದು ಗುಡಿಯ
ಕಟ್ಟಿಹೆನು ಇಂದು,
ನಾಳೆಯ ಕನಸ ಸೌಧಕೆ
ಮೆಟ್ಟಿಲಾಗಬಹುದೇ
ಇಂದೆಂಬುದು.

ಭೂತ ವರ್ತಮಾನ
ಭವಿಷ್ಯಗಳ ನಡುವೆ
ಇರುವುದದು ಮೂರೇ ದಿನ,
ನಿನ್ನೆಯದು ಕಾಯಬಹುದೇ
ನನ್ನ ನಾಳೆಯನು.

ಮೂರೇ ಮೆಟ್ಟಿಲುಗಳಲಿ
ಸಾಗಬಹುದಾದರೆ
ಜೀವನ ಪಯಣ,
ಸಾಕದುವೇ ನನಗೆ
ನಾಳೆಗಳ ನಾಳೆಯಲಿ
ನಗುವ ಸೂಸಲು.

31 July, 2013

*ನನ್ನೆದೆಯಾ ಹಾಡು*



ಪ್ರೀತಿಯ ಪ್ರಣತಿ
ನೀನಾಗುವುದಾದರೆ,
ಬೆಳಗುವ ಜ್ಯೋತಿ
ನಾನಾಗುವೆ...
ಭಾವಕೆ ಭಾವವ
ನೀ
ಬೆಸೆಯುವುದಾದರೆ
ನಿನ್ನ ಹೆಸರಿಗೆ
ಉಸಿರ ಜೊತೆಯಿಡುವೆ.

*********

ಮರಳ ಮೇಲೆ
ಬರೆದೆ ಗೆಳೆಯಾ
ನನ್ನ ಒಲವಿನೋಲೆಯ
ಅಲೆಗಳವು ಬಂದು
ಕದ್ದೊಯ್ದರೂ...
ನನ್ನೊಲವು ಮಾತ್ರ
ನಿನ್ನದೇ.

*********

ಮನಸಿನಾಳದಿ
ನಿನ್ನ
ನೆನಪಿನಲೆಗಳ
ಕಲರವ,
ಇಡುತ್ತಾವೆ
ಎನ್ನೆದೆಗೆ
ಪ್ರೀತಿ
ಕಚಗುಳ

ನಾಳೆಗಳಿರಲಿ ನಮಗಾಗಿ...



ಅರಳುವ ಹೂವುಗಳು
ನಾವು,
ಕೀಳದಿರಿ ನೀವು
ಈ ಮೊಗ್ಗುಗಳ.

ಜಾತಿಯ ಬೇಲಿಯ
ಹಾಕದಿರಿ ನಮಗೆ,
ಕಲಿಯಬೇಕಿದೆ ನಾವು ಈ
ಮಹೋನ್ನತ ಸಂಸ್ಕೃತಿಯ.

ನಾಳೆಯ ಕಾಯುವ
ಯೋಧರು ನಾವು,
ಕಸಿಯದಿರಿ ನೀವೆಮ್ಮಯ
ಕನಸುಗಳ.

ಕತ್ತಲೆ ಕಳೆಯುವ
ಸೂರ್ಯರು ನಾವು,
ಕರಗಿಸಬೇಡಿ ಈ
ನಗುವನ್ನು.

ಚಿಂತೆಯೆ ಇಲ್ಲದ
ಭಾವವು ನಮ್ಮದು,
ತುಂಬದಿರಿ ಭಯದ
ನೆರಳನ್ನು.

ನಾಳೆಯೆಂಬುದು
ನಮ್ಮದೇ ಎಂದೂ,
ಓ ಹಿರಿಯರೇ ಹರಸಿ
ನೀವೆಮ್ಮನ್ನ

ಹನಿ ಹನಿ ಪ್ರೇಮ್ ಕಹಾನಿ...



ಓ ಗೆಳತಿ
ಕರುಣಿಸು
ನಿನ್ನೊಲವ

ನೂರು ಜನ್ಮದ
ಅನುಬಂಧಕೆ,
ಕಾಯಲಾರೆ
ನಾ
ವಿರಹದಿ
ಮುಂದೊಂದು
ಜನ್ಮದ ಮೈತ್ರಿಗೆ.

*********

ಒಲವ ಲತೆಯಾಗು
ನೀನು
ಆಸರೆಯ ವೃಕ್ಷ
ನಾನಾಗುವೆ,
ತಬ್ಬಿ ಹಬ್ಬಿಕೋ
ನೀ ಎನ್ನ
ಪ್ರೀತಿ ಹೂವ
ಅರಳಿಸಬೇಕಿದೆ ನಾವಿಂದು.

14 July, 2013

ನನ್ನ ಕನಸೇ...



ಕದಿಯಬೇಡವೇ
ಹುಡುಗಿ
ನೀ
ಎನ್ನ
ಕನಸುಗಳನ್ನ,
ತಬ್ಬಿ ಮಲಗಬೇಕು
ನಾ
ನಿನ್ನ
ನೆನಪುಗಳನ್ನ.

*********

ಕನಸ ಹಂದರದಿ
ಅರಳಿದ
ಕಾವ್ಯ ಕುಸುಮ
ನೀನು,
ಮನಸ ತೋಟದ
ಒಲವ
ಲತೆಯಾಗಬಾರದೇನು.

*********

ನೀ
ಬಾನಾದರೂ
ಸರಿ,
ಭುವಿಯಾದರೂ...
ಒಲವ
ಬಲೆಯ ಬೀಸಿ
ತಬ್ಬಿ ಹಿಡಿವೆ
ನಾನು.

**ಒಲವ ಸಿಂಚನ**



ಮನಸ ಆಗಸದಲ್ಲಿ
ನಿನ್ನ ನೆನಪುಗಳ
ಕಾರ್ಮೋಡ ಕವಿದಿದೆ
ಗೆಳತಿ,
ಪ್ರೀತಿ ಮಳೆಯ
ನಿರೀಕ್ಷೆ ಸುಳ್ಳಾದರೂ
ಕಾವ್ಯ ಸಿಂಚನವಾಗುವುದೆಂಬ
ತೃಪ್ತಿ ಮಾತ್ರ
ನನ್ನದು.

*********

ವರುಣನಾಗಮನಕೆ
ಭುವಿಯು ಕಾತರಿಸಿದಂತೆ
ಮನಸ ತೆರೆದು
ಕಾದಿಹೆನು
ನಿನ್ನೊಲವಿನ
ಆಗಮನಕೆ
ಹುಡುಗಿ,
ಮನಸು ಬರಡಾಗುವ
ಮುನ್ನ ಸುರಿಸು
ನೀ
ಒಲವ ಸಿಂಚನ.

30 June, 2013

*ಬೆಳದಿಂಗಳು*



ಕನಸಿನೂರಿಂದ
ಮನಸಿನೂರಿಗೆ
ಎಂದು ಬರುವೆ
ಹೇಳು ಹುಡುಗಿ,
ತಾರೆಗಳ
ನಡುವೆ ಕುಳಿತು
ಚಂದಿರ
ನಗುತಾನೆ
ನಾ
ಒಂಟಿಯೆಂದು.

*********

ಚಂದ್ರನಿಗೂ
ಕೂಡ ನಿನ್ನ
ನೋಡುವ ಆಸೆ
ಹುಡುಗಿ,
ಅದಕೆಂದೇ ಆಗಾಗ
ಬರುತ್ತಾನವ
ಮೋಡಗಳ
ಮರೆಯಿಂದ.

23 June, 2013

**ತುಂತುರು**



ನೆನಪ
ಮಳೆಯಲ್ಲಿ
ಮಿಂದ
ಮನಕೆ
ನಿನ್ನೊಲವ
ದುಪ್ಪಟ್ಟ
ಬೇಕಿದೆ
ಗೆಳತಿ.

*********

ಬಿಳಿ ಮೋಡದ
ಮೇಲೆ
ಒಲವ
ಓಲೆಯ
ಬರೆದಿರುವೆ
ಗೆಳತಿ
ಹೊತ್ತು
ತರಬಹುದು
ಪ್ರೀತಿ
ಮುಂಗಾರು.

ನಾನು ನನ್ನ ಕನಸು...




ಪ್ರೀತಿಯಲಿ ನೀ ನನಗೆ
ತಾಯಿಯಾಗಬೇಕು ಹುಡುಗಿ,
ನಿನ್ನ ಪ್ರೀತಿಯ ಮಡಿಲಲ್ಲಿ ನಾನು ಪುಟ್ಟ
ಮಗುವಾಗಬೇಕು.

ಹಿತವಾದ ಸಂಜೆಯಲಿ
ನೀನೆನ್ನ ಜೊತೆಯಾಗಬೇಕು,
ನಿನ್ನ ಬಳುಕುವ ನಡುವ ಬಳಸಿ
ನಾ
ನಡೆಯುತಿರಬೇಕು.

ಕಾಶ್ಮೀರದ ಹಿಮದಲ್ಲಿ
ಮನಸಾರೆ ನಲಿಯಬೇಕು,
ನಿನ್ನ ಕಾಡಿಸಿ
ನಗುವ ಹೊಮ್ಮಿಸಿ
ಸಿಹಿ ಮುತ್ತೊಂದ
ಪಡೆಯಬೇಕು.

ಮಡಿಕೇರಿ ಮಂಜಿನ
ಹಿತವಾದ ಚಳಿಯಲಿ
ಮನಸ ತಣಿಸಬೇಕು
ನಿನ್ನ ನಗುವಿನ
ಮಧುರ ರೀತಿಯ
ಕಣ್ಣಲ್ಲೇ ಸವಿಯಬೇಕು.

09 June, 2013

ಕೊಳೆಯ ತೊಳೆಯೋಣ...



ಕಸವ ಗುಡಿಸೋಣ ಬನ್ನಿ
ಮನಸ ಕೊಳೆಯ ತೊಳೆಯೋಣ,
ಜಾತಿ ಧರ್ಮದ ಜಾಡ್ಯ ಕಳೆಯೋಣ
ಮೇಲುಕೀಳಿನ ಪರದೆ ಹರಿಯೋಣ.

ಪರರ ಗೌರವಿಸೋ ಗುಣವ ಬೆಳೆಸೋಣ
ಅಪನಂಬಿಕೆಯ ಅಪಶ್ರುತಿಯ ಅಳಿಸೋಣ,
ಪ್ರೀತಿ ಸ್ನೇಹದ ಗಿಡವ ಬೆಳೆಸೋಣ
ಮನಸ ಅಂಗಳದಿ ಶಾಂತಿಯ ಹೂವ ಅರಳಿಸೋಣ.

ಪರರ ಸಂಸ್ಕೃತಿಯ ಅರಿಯೋಣ
ಸಂಸ್ಕಾರವಂತರಾಗಿ ಬದುಕೋಣ,
ಲೋಭ ಮೋಹದ ಕೊಳೆಯ ತೊಳೆಯೋಣ
ದ್ವೇಷ ಅಸೂಯೆಗಳ ಕಳೆಯ ಕೀಳೋಣ.

ಕಟ್ಟಳೆಗಳ ಅಂಧಕಾರವ ಕಳೆಯೋಣ
ಅಹಂಕಾರದ ಮನೆಯ ಮುರಿಯೋಣ,
ಮನಕೆ ಅಂಟಿದ ಶಾಪವ ಕಳೆಯೋಣ
ಪ್ರೀತಿ ದೀಪವ ಹಚ್ಚಿ
ಮನಸ ಗುಡಿಯ ಬೆಳಗೋಣ.

ಆರದಿರಲಿ ಬದುಕು...



ಬದುಕ ಕರಗಿಸಬೇಡ
ಓ ವಿಧಿಯೇ
ಭಾವನೆಗಳ ಬರಿದಾಗಿಸಿ
ಕರಗಿಹುದು ಕನಸುಗಳು
ನಾಳೆಯ ಚಿಂತೆಯಲಿ,
ಸುಡುತಿಹುದು ಚಿಂತೆಯಾ
ಚಿತೆಯಲ್ಲಿ ಬದುಕು.

ಸುಡುವ ಬಿಸಿಲಿಗೂ ಬಾಡದ
ದೇಹಕೆ
ಮಳೆ ಹನಿಯು ಕೂಡ
ಭಾರವಾಗಿದೆಯಿಲ್ಲಿ,
ರೋಮ ರೋಮದಿ ಹುರುಪು
ತುಂಬಿದ ದೇಹ
ಬಟ್ಟ ಬಯಲಲಿಟ್ಟು ಸುಟ್ಟ
ಹಾಗಿದೆಯಿಲ್ಲಿ.

ಭಾವನೆಗಳ ಚದುರಿಸಿ
ಕನಸುಗಳ ಕೊಲ್ಲಬೇಡ
ಬದುಕೇ
ನಿಂತರೂ ನಿಲ್ಲಬಹುದು ಉಸಿರು
ಈ ಹತಾಶೆಯೊಳಗೆ,
ಕುದಿವ ಜ್ವಾಲಾಮುಖಿಯಾಗಿದೆ
ಮನವು
ತಂಪಾಗಬೇಕಿದೆ ನಿನ್ನ
ಕರುಣೆಯೊಳು
ಉಕ್ಕಿ ಚಿಮ್ಮುವ ಮುನ್ನ.

ಭಾವೋಗ್ವೇಗದೊಳು ಮುಳುಗಿ
ಕರಗಿ ಹೋಗುವ ಮುನ್ನ
ನಿನ್ನೊಲುಮೆ ಬೇಕಿದೆ ಇಲ್ಲಿ,
ನಕ್ಕು ನಗಲಾರದೇ
ಅತ್ತು ಅಳಲಾರದೇ
ಚಡಪಡಿಸುವ ಮನಕೇ
ಆರದಿರಲಿ ಈ ಬದುಕಿನ ದೀಪ
ಕರುಣಿಸು ನೀನು ಓ ವಿಧಿಯೇ...

22 May, 2013

ಅರಳುವ ಓ ಹೂವುಗಳೇ...




ನಗುವ ಓ ಹೂವುಗಳೇ
ಉದಯ ರವಿಯ ಕಿರಣಗಳೇ,
ಕರಗದಿರಿ ನಾಳೆಯಲಿ
ಓ ಭರವಸೆಯ ಹನಿಗಳೇ.
 
ಭವಿಷ್ಯದ ಓ ತಾರೆಗಳೇ
ಅಳುಕದಿರಿ ನಾಳೆಯ ಬದುಕಿಗೆ,
ಬದುಕದಿರಿ ಚಿಂತೆಯ ನೆರಳಲಿ
ನಾಳೆಯಿರುವುದು ನಿಮಗಾಗೇ.

ಕಲ್ಲು ಮುಳ್ಳಿನ ಹಾಸಿಗೆಯೂ
ನೀವು ನಡೆಯುವ ದಾರಿಯಿದು,
ಹೆಜ್ಜೆಯನೆಂದೂ ಮರೆಯದಿರಿ
ನೋವು ನಲಿವಿನ ಪಯಣದಲಿ.

ಸಹಸ್ರ ಸಹಸ್ರ ಕೈಗಳಿವೆ
ನಿಮ್ಮ ಕನಸ ಕದಿಯೋಕೆ,
ಕುಗ್ಗದಿರಿ ನೀವೆಂದೂ
ರಾಗ ದ್ವೇಷಕೆ ಬಲಿಯಾಗಿ.

ಪುಣ್ಯ ಭೂಮಿಯ ಕೂಸುಗಳೇ
ಸಂಸ್ಕೃತಿ ರಕ್ಷಣೆ ನಿಮ್ಮ ಹೊಣೆ,
ಕರಗದಿರಲಿ ಈ ನಗುವು
ಜೀವನ ಪಯಣದ ಹೆಜ್ಜೆಯಲಿ.

ಭರತ ಭೂಮಿಯ ರತ್ನಗಳೇ
ಶಾಂತಿ ತೋಟದ ಹೂವಾಗಿ,
ಕಿಚ್ಚಿನ ಓ ಸಿಂಹಗಳೇ
ಕ್ರಾಂತಿಯ ಕಿಡಿ ನೀವಾಗಿ...

17 May, 2013

ಕಾವ್ಯ ಕನ್ನಿಕೆ...



ಪದಗಳಿಗೆ ಪದವಾಗಿ
ಅಕ್ಷರಗಳ ಮರೆಯಲಿ
ಕುಳಿತೆ,
ಭಾವನೆಗಳಲ್ಲಿ ಭಾವವಾಗಿ
ಮನಸನ್ನ ತುಂಬಿದೆ.

ಬರೆಯೋ ಪ್ರತಿ ಪದಗಳಿಗೂ
ಅರ್ಥವಾದೆ,
ಮೌನ ಮನದ ಭಾಷೆಗೆ
ಜೀವ ತುಂಬಿದೆ.

ಕನಸೊಂದ ಸೃಷ್ಟಿಸಿ
ಮಧುರ ಮಾತಾದೆ,
ಪ್ರೀತಿಯ ಲೋಕದಿ
ನನ್ನ ತೇಲಿ ಬಿಟ್ಟೆ.

ಪ್ರತಿ ಮಾತಲ್ಲೂ ನಗುವ
ಚಿಲುಮೆಯಾದೆ,
ನೋವಿರದ ಪ್ರೀತಿಗೆ
ಹೊಸ ಭಾಷ್ಯ ಬರೆದೆ.

ಖುಷಿಯಲ್ಲಿ ನಗದೆ
ನೋವಲ್ಲಿ ಅಳದೆ
ನನ್ನ ಜೊತೆಯಾದವಳೇ,
ಏಕಾಂತದಲ್ಲಿ ಹೂವಾಗಿ
ಅರಳಿ ನಿಂತವಳೇ.

ಜೊತೆಯಾದೆ ಯಾವ
ಹಂಗಿಲ್ಲದೇ
ಪ್ರೇಮಿಯಾದೆ ನಾನಿಂದು
ನಿನ್ನಿಂದಲೇ,
ಒಲವ ಕವಿತೆಗೆ ನೀ ಬಂದು
ಜೀವ ತುಂಬಬೇಕಾಗಿದೆ...

ನಿರೀಕ್ಷೆ...



ಮನಸು ಎಲ್ಲೋ ಜಾರಿದೆ
ಹೆಸರ ನೆಪವ ಮಾಡಿದೆ,
ಆ ಹೆಸರಲ್ಲೆನೋ ಮೋಡಿಯಿದೆ
ಮನದಿ ನಿಶೆಯ ತುಂಬಿದೆ.

ಮತ್ತೆ ಕನಸು ಶುರುವಾಗಿದೆ
ಕಣ್ಣು ತಾನು ನೋಡದೇ,
ಪ್ರೀತಿಯ ಹೆಸರಿಡಬಹುದೇ ಇದರ ರೀತಿಗೆ
ಮನಸ ಈ ಮಧುರ ಭಾವಕೆ.

ಮನವು ಒಲವ ಬಯಸಿದೆ
ಜೊತೆಯು ಇಲ್ಲಿ ಸಿಗಬಹುದೇ,
ಯಾರು ತಿಳಿಯದ ಕನಸಿದು
ಒಲವ ಸಮ್ಮತಿ ಸಿಗಬಹುದೇ.

ಕಾಡೋ ಮನಸಿನ ಭಾವವು
ಕೈಯ ಹಿಡಿದು ನಡೆಸೀತೇ,
ಒಲವ ದಾರಿಯ ಪಯಣದಿ
ಪ್ರೀತಿಯೆಂಬುದು ಸಿಗಬಹುದೇ...

ಪ್ರೀತಿ ಮಾಯೇನಾ ಮನಸು ಮಾಯೇನಾ...



ಪ್ರೀತಿಯೆಂಬುದು ಮರೀಚಿಕೆಯೇ
ಹೇಳು ಹುಡುಗಿ,
ಬದುಕೆಂಬುದು ಬರಿಯ ಭ್ರಮೆಯಾಗಿದೆಯಲ್ಲೇ.

ನೂರು ನೋವುಗಳ ಸುತ್ತಾ
ಗಿರಕಿ ಹೊಡೆದಿದೆ
ನೋಡೆನ್ನ ಮನವು,
ಮೌನ ಮರೆತು ನೀ
ಮಾತಾಡಬಾರದೇಕೆ?

ಪ್ರೀತಿಯಲಿ ಅನುಮಾನಕೆ
ಅರ್ಥವೆಲ್ಲಿದೆ ಗೆಳತಿ,
ಕಣ್ಣೀರೊರೆಸುವ ಪ್ರೀತಿಯೇ
ನೋವಾಗಿ ಕಾಡಿದೆಯಲ್ಲೇ.

ನೂರು ಆಣೆಗಳ ಇತ್ತು
ಸಲಹಿದ ಪ್ರೀತಿಯಿದು,
ಸುಳ್ಳೆಂಬುದು ಬರಬಹುದೇ
ನನ್ನ ನಿನ್ನ ನಡುವಿನಲಿ.

ನೀನೆ ಮೊದಲು ನೀನೇ ಕೊನೆಯು
ಈ ನನ್ನ ಬದುಕಲಿ,
ನೀನೇ ಮೊದಲು ಶೂನ್ಯವದುವೇ
ಕೊನೆಯು ಎಂದು ಇಂದೇಕೊ ಅನಿಸಿದೆ.

ಮರೆತು ಕೂಡ ಮರೆಯಲಾರೆ
ಎಂದೂ ನಾನು ನಿನ್ನನು,
ಮೌನದಲ್ಲೇ ಮಾತು ಮರೆಸೋ
ಮನಸು ಯಾಕೆ ಮಾಡಿದೆ.

ಉಸಿರು ಉಸಿರಿನ ಪ್ರತಿ ತುಡಿತವೂ
ನಿನ್ನ ಹೆಸರ ಬಯಸಿದೆ,
ಮರೆತೂ ಕೂಡಾ
ಮರೆಯಬೇಡ
ಈ ಜೀವ ನಿನಗೆ ಕಾದಿದೆ.

ಮನಸ ಬಿಚ್ಚಿ ಮನದ ಭಾವ

ತಿಳಿಸು ನೀ ಒಮ್ಮೆಲೇ,
ನಿನ್ನ ಇಷ್ಟ ಕೇಳುವಾಸೆ
ಈ ಜೀವ ಕಾತರಿಸಿದೆ.

ಇತ್ತ ಭಾಷೆ ಮರಳಿ ಕೊಡುವೆ
ನೋವನೆಂದೂ ನೀಡೆನು,
ಮನದ ಆಸೆ ಅರುಹೆ ನೀನು
ಪ್ರೀತಿ ಬಂಧನವನೇ ಕಳೆವೆನು.

29 April, 2013

ಮರುಕಳಿಸದಿರು ಮರೆವೇ...



ಮರುಕಳಿಸದಿರು ಮರೆವೇ
ನನ್ನ ಒಲವ ಯಾತ್ರೆಯೊಳಗೆ,
ಕನಸೊಂದು ಶುರುವಾಗಿದೆ
ಈಗ ತಾನೇ.

ಒಳಗಾಗದಿರಲಿ ಬದುಕು
ನಿನ್ನ ಅವಕೃಪೆಗೆ,
ಕರಗದಿರಲಿ ಕನಸು
ಪ್ರೀತಿ ಕೈ ಸೇರುವ ಮುನ್ನ.

ಭಾವ ರಿಂಗಣದೊಳು
ಮೊಳಗದಿರಲಿ ನಿನ್ನ
ಅಪಶ್ರುತಿಯು,
ಬದುಕೆಂಬ ಹಡಗು
ಮುಳುಗದಿರಲಿ ಈ ಪ್ರೀತಿ
ಯಾತ್ರೆಯಲಿ.

ಕರುಣೆಯಿರಲಿ ಬದುಕೇ
ಈ ಪ್ರೇಮಿಯ ಮೇಲೆ,
ಕನಸುಗಾರನ ಮೇಲೆ
ನಿನಗೇಕೆ ಮುನಿಸೇ.

ವರವಾಗು ಮರೆವೇ ಈ
ಪ್ರೇಮಿಗಾಗಿ,
ಹರಸು ನಿತ್ಯವೂ ಹೊಸ
ಕನಸಿಗಾಗಿ.

ಕನಸಿನ ಸುತ್ತಾ...


ಮೊಂಬತ್ತಿ ಹಚ್ಚಬೇಕಿದೆ
ಹುಡುಗಿ,
ಕತ್ತಲೆಯ ಕರಗಿಸಲು ಅಲ್ಲ,
ಖುಷಿಯ ಬಿತ್ತರಿಸಲೂ ಅಲ್ಲ,
ಕಳೆದು ಹೋದ
ನನ್ನ
ಕನಸುಗಳ ಹುಡುಕಲು.

**********

ನೆನಪ ಮನೆಯಲ್ಲಿ
ಮಗುವಾಗಿ ಮಲಗು
ಗೆಳತಿ,
ಮನಸು ಖಾಲಿಯಿದೆ,
ನಿದ್ದೆ ಕದಿಯುವ
ಕನಸಿಗೆ
ಈ ಪ್ರೀತಿ ಕಾವಲಿದೆ.

ಆಸರೆ...



ಬಳ್ಳಿಗೆ ಮರವೇ ಆಸರೆ ಈ ಜಗದ ಸೃಷ್ಟಿಯಲಿ,
ಪ್ರೀತಿಯ ಬದುಕಿಗೆ ಪ್ರಕೃತಿಯ ಪರಿಭಾಷೆ ಇದ್ದರೂ ಇರಬಹುದೇ?

ಹಾರೋ ಹಕ್ಕಿಗೆ ತನ್ನ ರೆಕ್ಕೆಯೇ ಆಸರೆಯೂ,
ಬೀಸೋ ಗಾಳಿಯ ಹಂಗಿಲ್ಲದ ಜೀವಕೆ ನಂಬಿಕೆಯೇ ಆಸರೆಯೇ?

ಈಜುವ ಮೀನಿಗೆ ಸದಾ ಹರಿಯೋ ನೀರೇ ಆಸರೆ,
ಉಸಿರಿಗೂ,ಬದುಕಿಗೂ ನಂಟಿರಬಹುದೇ ಈ ಸ್ನೇಹದ ಆಸರೆ?

ಬದುಕ ನಡೆಸಲು ಬೇಕು ಭರವಸೆಯ ಆಸರೆ,
ನಂಬಿಕೆಯ ಬಲವಿರಬೇಕು ನಾಳೆಯ ಬದುಕಿಗೆ.

ಕನಸ ಹೂವಿಗೆ ಎಂದೂ ಪ್ರೀತಿಯೇ ಆಸರೆ,
ಸ್ನೇಹದ ಬಂಧವೆ ತಾನೆ ಈ ಕನಸಿಗೆ ಪ್ರೇರಣೆ?

ನಂಬಿಕೆಯೇ ಉಸಿರು ಪ್ರೀತಿಯೇ ಬದುಕಾಗಿರಲು,ಅರಳಬಹುದಲ್ಲವೇ ಸುಂದರ ಬದುಕಿನ ಕವನ,
ಆಸರೆಯಾಗಬಹುದಲ್ಲವೇ ಸುಂದರ ಕನಸಿನ ಜನನ...

11 April, 2013

ಮತ್ತೆ ಬಂದಿದೆ ಹೊಸ ವರುಷ...



ಬಂದಾ ಬಂದ ವಸಂತ ಬಂದ,
ಋತುಗಳ ರಾಜ ತಾ ಬಂದ,
ಕಾಲ ಚಕ್ರವದು ಉರುಳುತಲಿರಲು,
ಕಾಲಗರ್ಭವದು ಮರೆಸುತಲಿರಲು ಮತ್ತೆ ಬಂದ ತಾನ್ ನವ ವಸಂತ.

ಚೈತ್ರೆಯು ತಂದಿದೆ ಹೊಸ ಚಿಗುರಿನ ಹೊಸ ಹರುಷ,
ಪ್ರಕೃತಿಗಾಗಿದೆ ಚಿಗುರಿನ ಸಂಮೃದ್ಧಿಯ ಹೊನಲು,
ಚಿಗುರಿದ ಮಾಮರದಲಿ ಕೋಗಿಲೆ ಉಲಿದಿದೆ ನವ ವಸಂತ ಗಾನ.

ಮಾವಿನ ಒಗರಿನ ಜೊತೆ ಹುಣಸೆಯ ರುಚಿಯೂ,
ತುಂಬಿದೆ ಭೂದೇವಿಯ ಬಯಕೆಯ ಒಡಲು,
ಚಿಗುರಿನ ಜೊತೆಯಾಗಿದೆ ಹೊಸತನದ ಖುಷಿಯೂ.

ಹೊಸತು ಹೊಸತುಗಳ ಜೊತೆಗೆ ಮತ್ತೆ ಬಂದಿದೆ ಹೊಸ ವರುಷ,
ಯುಗ ಯುಗಗಳೇ ಉರುಳಿದರು ಮತ್ತೆ ತಂದಿದೆ ಹೊಸ ಹರುಷ,
ಈ ಸೃಷ್ಟಿಯ,ಈ ಪ್ರಕೃತಿಯ ಜೀವಂತಿಕೆಯಾಗಿ ಮೆರೆದಿದೆ ಯುಗಾದಿ,
ಸುಖ ದುಖಃಗಳ ಸಮ್ಮಿಲನದ ಬೇವು ಬೆಲ್ಲವ ಸವಿಯೋಣ ಬನ್ನಿ...

ಪ್ರೀತಿಯ ತುಂತುರು...



ಒಲವ ಹುಡುಗಿಯೇ ನನ್ನ ಮನಸಲಿ ತುಂಬಿರುವೆ ನೀನೇ ಎಂದೆಂದೂ,
ಪ್ರೀತಿ ಚೆಲುವೆಯೆ ನಿನ್ನ ಕನಸಲಿ ಬರುವೆ ನಾನೆಂದೂ.

ದೂರವೆಷ್ಟು ಇದ್ದರೇನು ಮನಸು ಜೊತೆಯಲಿದೆ,
ಮಿಡಿವ ಪ್ರತಿ ತುಡಿತವೂ ಕೂಡ ನಿನಗೆ ಮೀಸಲಿದೆ.

ಸೃಷ್ಟಿಯ ಸುಂದರ ಚಂದಿರನಲ್ಲೂ ನಿನ್ನ ಕಂಡಿಹೆನು,
ಪ್ರತಿ ಉಸಿರಲೂ ನೀನೇ ಬೆರೆತಿಹೆ ಬೆಳದಿಂಗಳಿನಂತೆಯೇ.

ಓಡುವ ಮೇಘವೂ ಕೂಡ ಬಿಡಿಸಿದೆ ನಿನ್ನದೇ ಚಿತ್ತಾರ,
ಮನದ ಆಗಸದಿ ಮೂಡಿದೆ ಇಂದು ನಿನ್ನದೇ ನೆನಪುಗಳವು ಕಾಮನಬಿಲ್ಲಾಗಿ.

ಬೀಸೋ ಗಾಳಿಯು ತಬ್ಬಿದೆ ಇಂದು ನಿನ್ನದೇ ಸ್ಪರ್ಶದಲಿ,
ಬೆಚ್ಚಗೆ ಮನಸು ಬಚ್ಚಿಟ್ಟುಕೊಂಡಿದೆ ನೂರು ಸವಿಮಾತು.

ಪ್ರೀತಿ ಮಿಡಿವ ಮನಸು ಕೂಗಿದೆ ಹರ್ಷದಲೇ ಇಂದು,
ಜೊತೆ ಸೇರುವ ಘಳಿಗೆ ಬಂದಿದೆ ಸನಿಹ ಓ ಒಲವೆ ಕೇಳಿಂದೂ...

ಈ ಒಲವು ನಿನಗಾಗಿ...



ಪ್ರೀತಿಯಲ್ಲೆನ್ನ ಕಣ್ಣ
ದೃಷ್ಟಿಯಾಗು ಗೆಳತಿ
ರೆಪ್ಪೆ ನಾನಾಗುವೆ
ನೀರಾಗಿ ಜಾರಿ ಹೋಗುವ ನಿನ್ನ
ತಡೆದಿಡುವೆ ಸ್ವಾತಿಮುತ್ತಾಗಿ.

ಹೃದಯದೊಳಗೆ ನೀ
ಬಂದು ಬಿಡು ಒಮ್ಮೆ
ಕನಸು ನಾನಾಗುವೆ
ಕಾಡಿ ಹೋಗುವ ನಿನಗೆ
ನೆನಪ ಬಾಗಿಲಿಡುವೆ.

ಮನಸ ತೋಟದಿ
ನಿನಗಿಷ್ಟವಾದ ಪ್ರೀತಿಯ ಹೂವ
ಬೆಳೆಸಿರುವೆ ಹುಡುಗಿ
ಪ್ರೇಮದೇವತೆಯಾಗಿ ಬಾ
ಮಾಲಿಯಾಗಿ ಕಾಯುವೆ ನಾನೆಂದು.

ಒಲವ ಆಗಸದಿ
ಕಾಮನಬಿಲ್ಲಾಗಿ ನೀ
ಏಳು ಬಣ್ಣಗಳ ಚಿತ್ತಾರ
ಬಿಡಿಸು ಬಾ
ಬಣ್ಣಗಳ ಮೆರೆಸೊ ಕುಂಚವಾಗುವೆ ನಾ.

ಓ ನನ್ನ ಮನಸೇ...




ಮನಸೆ ಮನಸೆ ಪ್ರೀತಿಯ ಮನಸೇ,

ಪ್ರೀತಿಗೆ ಸೋತ ಹುಚ್ಚು ಮನಸೇ,

ಸ್ನೇಹಕೆ ಜಾರೋ ಮುದ್ದು ಮನಸೇ,

ಕನಸು ಕಾಣೋ ಒಲವ ಮನಸೇ,

ಮರೆತೂ ಮರೆತು ಎಡವೋ ಮನಸೇ,

ನೋವಲ್ಲೂ ಕೂಡ ನಗುವ ಮನಸೇ,

ನಲಿವಲ್ಲಿ ಮೌನಿಯಾಗೊ ಪೆದ್ದು ಮನಸೇ,

ಇಷ್ಟನಾ ಮರೆತು ಬೆರೆಯೊ ಮನಸೇ,

ಸ್ವಾಭಿಮಾನಕೆ ಕಿಚ್ಚಾಗೋ ಮನಸೇ,

ಕಂಬನಿಗೆ ಕರಗೋ ಭಾವುಕ ಮನಸೇ,

ಮುದ್ದಾಗಿ ನಗುವ ಮಗುವಿನ ಮನಸೇ,

ಅರೆಕ್ಷಣ ನಿಲ್ಲದೆ ಓಡಾಡೋ ಮನಸೇ,

ತುಂಟಾಟವಾಡೊ ಕಳ್ಳ ಮನಸೇ,

ಚಿಂತೆಯನೆಲ್ಲ ಮರೆಸೊ ಮನಸೇ,

ನೂರಾರು ಕಾಲ ಸುಖವಾಗಿ ಬಾಳು, ಓ ಚೆಲುವ ಮನಸೇ...

03 March, 2013

ಪ್ರೀತಿ ಒಂಥರಾ...



ಪ್ರತಿ ಹೂವಿನ ದಳಗಳಲ್ಲಿ ತುಂಬಿರುವಂತೆ ಘಮವು,
ನಿನ್ನಲ್ಲಿ ತುಂಬಿ ತುಳುಕುತ್ತಿದೆ ಅಂತರ್ಯದ ಚೆಲುವು.

ಪ್ರತಿ ಹೂವಿನ ಮಕರಂದಕೆ ಹಾತೊರೆಯುವಂತೆ ದುಂಬಿಯು,
ನಿನ್ನೊಲವು ಆಹ್ವಾನಿಸೆ ಕಾತರಿಸಿದೆ ಮನವೂ.

ಉಕ್ಕಿ ಹರಿವ ತೊರೆಯಂತೆ ಮಿತಿಮೀರಿವೆ ಕನಸು,
ಮನಸ ತೊರೆಯಲ್ಲಿ ಈಜುವ ಮೀನಾಗಿವೆ ನಿನ್ನ ನೆನಪುಗಳು.

ಧುಮ್ಮಿಕ್ಕೋ ಜಲಪಾತವಾಗಿದೆ ನನ್ನೊಳಗಿನ  ನಿನ್ನೊಲವು,
ಮೋಹದ ಆವೇಗಕೆ ಮೈಮರೆತಂತಿದೆ ಮನವು.

ನೂರಾರು ಸವಿ ನೆನಪುಗಳ ಗೂಡಾಗಿದೆ ಮನವು,
ಎದೆಯೊಳಗೆ ಬಚ್ಚಿಡುವ ಮನಸಾಗಿದೆ ಈ ಒಲವ...

ಒಲವ ಸಖ...



ಗೆಳೆಯಾ ನೀನೆನ್ನ ಪ್ರೀತಿಯ ಲಹರಿ,
ಅನುಗಾಲವು ಇರಲಿ ಈ ಪ್ರೇಮದ ಪಲ್ಲವಿ.
ನಿತ್ಯನೂತನವೀ ಪ್ರೀತಿಯ ಬಂಧ,
ಮರೆತೂ ಮರೆಯದಿರು ಈ ಜನುಮಾನುಬಂಧ.

ನಲಿವೆಷ್ಟೇ ಇರಲಿ,ನೋವೆಷ್ಟೇ ಬರಲಿ,
ನಿನ್ನೊಲುಮೆ ನನಗೆಂದೂ ಇರಲಿ ಗೆಳೆಯಾ.
ಕಾಡಬೇಡ ಕನಸಾಗಿ,
ಜೊತೆಯಾಗು ಈ ಬಾಳ ನಗುವಾಗಿ.

ನಿದಿರೆಯಲೂ ಕಾಡುವ ಕಳ್ಳ ನೀನು,
ಅರೆಬಿರಿದ ಕಣ್ಣುಗಳು ಕಾಣುತಿವೆ ನಿನ್ನ ಕನಸ.
ನನಸಾಗಿ ಬರುವೆಯೆಂದು ಈ ಬಾಳಲಿ,
ತಡವರಿಸದೆ ಹೇಳೋ ನನ್ನಿನಿಯಾ.

ನಿನ್ನ ಒಲವಿನಪ್ಪುಗೆಯ ಪಡೆಯುವಾಸೆ,
ಕಾಯಿಸಬೇಡ ನನ್ನೊಲವೇ.
ಮನಸಗನ್ನಡಿಯಲಿ ನಗುವಾಗಿ ಬಾ,
ಕನಸ ಕರಗಿಸು ಬಾರೋ ಮುದ್ದು ಚೆಲುವಾ.

ಒಲವಾಗಿ ಬಾ ಓ ಇನಿಯಾ,
ಪ್ರೇಮಸುಧೆಯಾಗು ಬಾ ಪ್ರೀಯ ಸಖನೇ.
ಪ್ರೀತಿಯ ರಥವೇರಿ ಬಾ ಗೆಳೆಯಾ,
ಬಾಳ ಜ್ಯೋತಿಯ ಬೆಳಗೋ ಸಖನಾಗು ಬಾ...

*ಆರಾಧಕ*


ಮನಸೆಂಬ ಗುಡಿಯಲ್ಲಿ
ನಿನ್ನ ಮೂರ್ತಿಯನಿರಿಸಿ
ಒಲವೆಂಬ ಪೂಜೆಗೈವ
ನಾ
ನಿನ್ನ ಪ್ರೀತಿಯ
ಆರಾಧಕ.

ನನ್ನೊಲವೇ...



ಕನಸ ಕಡಲಲ್ಲಿ
ನೆನಪ ಅಲೆಯಾಗು,

ಮನಸ ಝರಿಯಲ್ಲಿ
ಒಲವ ಸುಧೆಯಾಗು,

ಪ್ರೀತಿ ಮಡಿಲಲ್ಲಿ
ನಗುವ ಮೊಗವಾಗು,

ಸುರಿವ ಮಳೆಯಲ್ಲಿ
ಒಲವ ಮಿಂಚಾಗು,

ಕೊರೆವ ಚಳಿಯಲ್ಲಿ
ಉಸಿರ ಸೆರೆಯಾಗು,

ಜನುಮ ಜನುಮದ ಪ್ರೀತಿಗೆ
ಒಲುಮೆಯ ಗರಿಯಾಗು,

ಎಂದೂ ಮುಗಿಯದ ಮೈತ್ರಿಗೆ
ಪ್ರೇಮಧಾರೆಯಾಗು ಓ ಒಲವೇ.