29 December, 2024

ಅರುಣರಾಗ...

ಜಾರಿಹೋದ ಕಾಲವೂ 
ನೂರು ಕಥೆಯಾ ಹೇಳಿದೆ,
ನಿನ್ನೆಗಳೆಲ್ಲಾ ಇತಿಹಾಸವಾದರೂ 
ಮರೆಯೋದು ಇಲ್ಲಿ ಬಹಳಷ್ಟಿದೆ...

ಬೆಸೆದ ಹೊಸ ಸಂಬಂಧಗಳು 
ಹಲವು ಪಾಠವ ಹೇಳಿವೆ,
ಬಂಧವಿಲ್ಲಿ ನೂರಾದರೂ 
ಅನುರಾಗವಿಲ್ಲಾ ಮನಸಲಿ...

ಬದುಕು ಬಯಲಿನ ಆಟವೂ 
ನೂರು ಕಂಗಳ ನೋಟದೀ,
ನೂರು ಕನಸಿನ ಓಟವೂ 
ಕಾಲದ ಜೊತೆಗೆ ಪೈಪೋಟಿಯೂ...

ಬರುವ ನಾಳೆಯ ದಿನಗಳವು 
ಉತ್ತರ ಹುಡುಕದ ಪ್ರಶ್ನೆಗಳೇ,
ಭರವಸೆಯ ಮುಗುಳುನಗೆಯಲಿ 
ಮೂರುದಿನದ ಪಯಣವೂ...

20 December, 2024

ಭಾವಲೋಕ...

ಓ ಭಾವವೇ ಬಂದು ಬಿಡು ನೀ ಒಮ್ಮೆ 
ಸೇರಿಬಿಡು ಈ ಬದುಕನು ಈಗ,
ಬದುಕ ಕಟ್ಟಬೇಕು ನಾನು ಇಲ್ಲಿ 
ನಿನ್ನ ನೂರು ನೆನಪುಗಳ ಜೊತೆಗೆ...

ಹಾಯಾಗಿ ಹಾರಿಬಿಡು ಒಮ್ಮೆ 
ಓ ಕನಸೇ ಈ ಬದುಕಿನಲಿ,
ನೀನಿರದ ಪ್ರತಿ ಕ್ಷಣವೂ ಮೌನ 
ಹೋಗದಿರು ಸರಿದು ದೂರ...

ಬಂಧನವಿರದ ಸಂಬಂಧವು ನೀನು 
ಬಿಟ್ಟು ಹೋಗದಿರು ಬದುಕನು,
ಒಲವಾಗಿ ಕಾಡಬೇಕು ನೀನು 
ಪ್ರೇಮಗೀತೆಯಾಗಿ ಹಾಡಬೇಕು ಇಲ್ಲಿ...

ಮುರಿಯದ ಮೌನದ ಹಿಂದೆ 
ಅರಿಯದ ಪ್ರೀತಿಯಾಗಬೇಕಿಲ್ಲಿ ನೀನು,
ಹುಸಿಮುನಿಸಿನ ಹಿಂದೆ ಸರಿದು 
ಬದುಕ ಬೆಳಗು ಓ ಭಾವವೇ...

29 November, 2024

ಹೋರಾಟ...

ಬಣ್ಣ ಬಣ್ಣದಾ ಮುಖವಾಡ 
ಬದುಕಿನಾ ಪ್ರತಿ ಮಜಲೊಳಗೆ ,
ನೆನಪುಗಳ ಜೊತೆಗೆ ಗುದ್ದಾಟ 
ಕನಸುಗಳ ಮೆರವಣಿಗೆಯೊಳಗೆ ...

ಆಸೆಗಳ ಜೊತೆಗೆ ತಿಕ್ಕಾಟ 
ಬದುಕಿನ ಪಯಣದ ಕೊನೆವರೆಗೂ,
ನಿರೀಕ್ಷೆಗಳ ಜೊತೆಗಿನ ಹೊಡೆದಾಟ 
ನಿರಾಸೆಯ ಜೊತೆಗೆ ಕೊನೆಗೆ ನಿರ್ಲಿಪ್ತ...

ಜಗದೊಳು ಸಂಬಂಧಗಳ ತಕಧಿಮಿತಾ 
ಮನಸಲಿ ಭಾವಗಳ ಹೊಯ್ದಾಟ,
ನೆಮ್ಮದಿಯ ಹುಡುಕಾಟದಲಿ 
ನೂರಾರು ಬಗೆಯ ಹೋರಾಟ...

ವಿಳಾಸವ ಮರೆಯದ ಕರ್ಮಕ್ಕೆ 
ಹೆದರದೆ ನಡೆದಿದೆ ಹೋರಾಟ,
ಕರಗಿ ಹೋಗಿದೆ ಕಾಲವು ಕೂಡ 
ಬದುಕುವ ಛಲದೊಳಗಿನ ಆಟಕ್ಕೆ...

20 November, 2024

ಜಗದ ಸಂತೆಯಲಿ...

ಮನದ ಮೌನದ ಮಾತಿಗಿಂತ 
ಕನಸಿನೊಳಗಿನ ಹಾಡೇ ಖುಷಿಯೀಗ,
ಜೊತೆಗೆ ಇರುವ ಮೌನಕ್ಕಿಂತ 
ಏಕಾಂಗಿತನದ ಪಾಡು ಖುಷಿಯಾಗಿದೆಯಲ್ಲ ...

ಹುಟ್ಟಿನ ಅಳುವಿನ ಜೊತೆಗೊಂದು ನಗುವು 
ಸಾವಿನ ವಿದಾಯಕ್ಕೊಂದು ಆಳುವು,
ಬದುಕು ಬೆಸೆದ ಭಾವಗಳ ಕೋಟೆ 
ನಗು ಅಳುವಿನ ಜೊತೆಗೆ ನಿರ್ಲಿಪ್ತ ಜೀವ...

ಜೀವ ಅರಳಿಸೋ ಭಾವದೊಳಗೆ 
ಮರುಳು ಮಾಡುವ ಮಾಯಾಲೋಕ,
ಬದುಕು ಅರಳಿಸೋ ಜೀವದೊಳಗೂ
ನಿನ್ನೆ ನಾಳೆಗಳ ಜೊತೆಗೆ ಪೀಕಲಾಟ...
 
ನಡೆಯುತಿಹುದು ಬದುಕಿನ ಜಾತ್ರೆಯಿಲ್ಲಿ
ಜಗದ ಸಂತೆಯೊಳು ತಿರುಗಬೇಕು,
ಆರು ಭಾವಗಳ ನೂರು ಕನಸುಗಳ 
ಮೆರೆಸಿ ಮರೆಯಬೇಕು ಬದುಕಯಾತ್ರೆಯೊಳಗೆ...

30 October, 2024

ದೀಪಾವಳಿ...

ಹಚ್ಚುವೆನು ನಾನೊಂದು ಹಣತೆ 
ಬೆಳಗಬೇಕಿಲ್ಲಿ ಓ ಬೆಳಕೇ,
ಮನದ ಅಂಗಳವ ತುಂಬಿ 
ನಾಳೆಗಳು ನಗುವಂತೆ...

ಬೆಳಗಬೇಕಿಲ್ಲಿ ಭರವಸೆಯ ಜ್ಯೋತಿ 
ಕನಸುಗಳು ನಲಿದಾವು ನೋಡಿ,
ಉರಿಯಬೇಕಿಲ್ಲಿ ನೀ ದೀಪವಾಗಿ 
ಮನದ ಅಂಗಳದ ಜ್ಞಾನ ದೀವಿಗೆಯಾಗಿ...

ಪ್ರೀತಿಯಿಂದಲಿ ಹಚ್ಚುವೆನು ನಿನ್ನಾ 
ಪ್ರೀತಿಯ ಹಂಚಬೇಕಿಲ್ಲಿ ಬೆಳಗೇ,
ಮಾನ ಅವಮಾನಗಳ ಪರದೆ ಸರಿಸಿ 
ಬೆಳಗಬೇಕಿಲ್ಲಿ ನೀ ಬದುಕಾ...

ಹಚ್ಚುವ ದೀಪವಿದು ಬರಿಯ ದೀಪವಲ್ಲ 
ಹತ್ತಾರು ಕನಸುಗಳ ಒಂದು ಮಿಂಚು,
ಕಾಲ ಸರಿದು ಹರಿಯಲಿ ದೂರ ದೂರ 
ಬೆಳಗುತಿರಲಿ ಬದುಕು ಬೆರಗಿನಿಂದ....

21 October, 2024

ಮನಸೆಂಬ ಮಾಯಾವಿ...

ಮನಸೇ ನೀನಿಲ್ಲಿ ಭರವಸೆಯೂ
ಕನಸುಗಳು ಕಮರಿದರೂ,
ಆಸೆಗಳ ಚಿಗುರಿಸಿ ನೀ 
ನೀರೆರೆವಾ ಭಾವಸಾಗರವೇ...

ಮನಸೇ ನೀನೊಂದು ಬೆಳಕಿಲ್ಲಿ 
ಕಷ್ಟಗಳ ಕಾರ್ಮೋಡ ಕವಿದರೂ,
ನಗುವಿನಾ ಚಪ್ಪರ ಹಾಸಿ 
ನಲಿವಿನ ದೀಪವ ಬೆಳಗಿಸುವೆ...

ಮನಸೇ ನೀನಿಲ್ಲಿ ತಂಗಾಳಿ 
ಮೈಸವರಿ ಮುದ್ದಾಡೋ ಮಾಯಾವಿ,
ಒಂದೊಮ್ಮೆ ಸುಂಟರಗಾಳಿ 
ಕಾಲದ ಹರಿವಿನೊಳು...

ಬದಕೇ ನೀನಿಲ್ಲಿ ಜಟಕಾಬಂಡಿ 
ಹೊರುವೆ ಎಲ್ಲಾ ಭಾರಗಳ,
ಮನಸೇ ನೀನೊಬ್ಬ ಮಾಯಾವಿ 
ಮೆರೆವೆ ಎಲ್ಲಾ ಭಾವಗಳ...

30 September, 2024

ಭಾವಯಾನ...

ಮರೆಯುವುದು ಜೀವ 
ಮರೆಸುವುದು ಭಾವ,
ಕಾಲದ ಲೀಲೆಯಲಿ 
ಬದುಕಿನ ಯಾತ್ರೆಯಲಿ...

ಮೆರೆಸುವುದು ಕಾಲ 
ಮೆರೆಯುವುದು ಬದುಕು,
ಮರೆಸುವುದು ಕಾಲ 
ವಿಧಿಯ ವಿಧಾನದಂತೆ...

ಜ್ಞಾನವೆಂಬ ಬೆಳಗು 
ಬದುಕಿಲ್ಲಿ ಬೆರಗು,
ನಿನ್ನೆ ನಾಳೆಗಳ ಸೆರಗಿನಲಿ 
ಒಂದಿಷ್ಟು ಹೊಸದು...

ಲೋಕದಾ ಡೊಂಕಿನೊಳು 
ಮನಸೇ ಮಂಕಾಗಿರಲು,
ಬದುಕೇ ಇಲ್ಲಿ ಬೆರಗು 
ಒಂದಷ್ಟು ತಿರುವಿನೊಳು...

19 September, 2024

ಬಯಲು ದಾರಿಯಲಿ...

ಲೋಕದಾ ಬಟ್ಟಬಯಲೊಳಗೆ 
ಹಗಲು ಬೆಳಕಿನ ಚಿತ್ತಾರ,
ಬದುಕಿನ ಬಯಲೊಳಗೆ 
ನೋವು ನಲಿವುಗಳ ಅವತಾರ...

ಕನಸುಗಳೊಂದಿಗೆ ಈ ಬದುಕು 
ಆಸೆಗಳೊಂದಿಗೆ ಈ ಮನಸು,
ನಾಳೆಯ ನೆಮ್ಮದಿಗಾಗಿ ಇಲ್ಲಿ 
ಆಸೆಗಳ ಮಾರಿದೆ ಓ ಬದುಕೇ...

ಪ್ರೀತಿಯೊಂದಿಗೆ ಈ ಜಗವೂ 
ಸ್ನೇಹದಿಂದಲೇ ಈ ಒಲವು,
ಪ್ರೀತಿಯ ಅಮೃತ ಕಡೆಯಲು 
ಸ್ನೇಹವೇ ಕರಗಿದೆ ಮಂಥನದಿ...

ತಾಳ್ಮೆಯ ಪಡೆಯಲು ಬದುಕಲ್ಲಿ 
ಕೋಪವ ಮರೆತೆ ಲೋಕದಲಿ,
ಅಳುವನು ಮರೆಯಲು ಬದುಕಲ್ಲಿ 
ನಗುವನೇ ಖರೀದಿ ಮಾಡಿರುವೆ...

31 August, 2024

ಬೆಳಗು...

ಇರುವ ಜಗದೊಳಗೆ ಹರಿವ ತೊರೆಯಂತೆ 
ಮೂರು ದಿನದ ಬದುಕು,
ಒಂದು ಮುಂಜಾವು ಮತ್ತೆ ಮುಸ್ಸಂಜೆ 
ಬದುಕ ಹಾದಿಯೊಳಗೆ...

ಬಾಲ್ಯದೊಳು ತುಂಟಾಟ 
ಹರೆಯದೊಳು ಕಣ್ಣಮುಚ್ಚಾಲೆಯಾಟ,
ನಡುವೆ ನೋವು ನಲಿವುಗಳ ಕೂಟ 
ಮುಪ್ಪಿನೊಳು ಮತ್ತೆ ವೇದಾಂತ...

ಬಾಲ್ಯದಲಿ ಕನಸಿನೊಳು 
ಭಾವನೆಗಳೊಳಗೆ ಹರೆಯದಲಿ,
ಆಸೆಯೊಳು ಮುಪ್ಪಿನಲಿ 
ಬದುಕು ಸವೆದಿಹಿದು ಇಲ್ಲಿ ಕಾಣ...

ಬದುಕಿನ ಜಂಜಾಟಗಳ ನಡುವೆ 
ಮನಸು ಹುಡುಕಿದೆ ನೆಮ್ಮದಿಯ,
ಆಗೊಮ್ಮೆ ಈಗೊಮ್ಮೆ ಮತ್ತೆ ಹೊರಳಿ 
ಮನಸು ತುಳಿಯುತಿಹುದು ಸನ್ಯಾಸದ ಹಾದಿಯನ್ನೇ...

23 August, 2024

ಭಾವ ಶರಧಿ...

ಬದಲಾಗಿದೆ ಇಲ್ಲಿ ಬದಲಾಗಿದೆ 
ಕಾಲದ ಹರಿವಿನೊಳು ಬದಲಾಗಿದೆ,
ಮನಸಿಲ್ಲಿ ಪೂರಾ ಬದಲಾಗಿದೆ 
ಭಾವಗಳು ಎಲ್ಲಾ ಬದಲಾಗಿವೆ...

ಮರೆತುಹೋಗಿದೆ ಎಲ್ಲಾ ಮರೆತುಹೋಗಿದೆ 
ಜಗದ ಜಂಜಡದೊಳು ಎಲ್ಲಾ ಮರೆತುಹೋಗಿದೆ,
ಮರೆತುಹೋಗಿದೆ ಮನಸಿಲ್ಲಿ ಮರೆತುಹೋಗಿದೆ 
ತಪ್ಪನ್ನ ಕ್ಷಮಿಸೋದ  ಮರೆತುಹೋಗಿದೆ...

ಕಳೆದುಹೋಗಿದೆ ಇಲ್ಲಿ ಕಳೆದುಹೋಗಿದೆ 
ಲೋಕದಾ ಮಾಯೆಯೊಳು ಕಳೆದುಹೋಗಿದೆ,
ಮೋಹದಾ ಬಲೆಯೊಳಗೆ ಕಳೆದುಹೋಗಿದೆ 
ಎದೆಯೊಳಗೆ ಮನುಜತೆಯು ಕಳೆದುಹೋಗಿದೆ...

ಬದಲಾಗುತಾ ಎಲ್ಲಾ ಮರೆತಾಗಿದೆ 
ಮರೆತುಹೋಗಿ ಇಲ್ಲಿ ಕಳೆದಾಗಿದೆ,
ಬದುಕ ಕಲೆಯನ್ನು ಮರೆತಾಗಿದೆ 
ಮೌಲ್ಯಗಳೆಲ್ಲಾ ಇಲ್ಲಿ ಬರಿದಾಗಿದೆ...

31 July, 2024

ಪೂಜೆ...

ಭಕ್ತಿಯದು ಜೀವದಾ ಭಯವಲ್ಲ 
ಮುಕ್ತಿಯಾ ಕಡೆಗೊಂದು ನೋಟವಂತೆ,
ಪೂಜೆಯದು ಮನಸಿನ ಆಡಂಬರವಲ್ಲ 
ಬದುಕಿನ ಪಯಣಕೆ  ಹರಕೆಯಷ್ಟೇ...

ಸರಿಸಿ ಚಿಂತೆಯ ಪೂರಾ ಬದುಕಲಿ
ಪಯಣ ಮುಂದೆ ಸಾಗಲು ಇಲ್ಲಿ,
ಮನಸೇ ಮಂದಿರವು ಜೀವವೇ 
ಪ್ರಾರ್ಥನೆಯಷ್ಟೇ ಇಲ್ಲಿ ನೆಮ್ಮದಿಯೂ...

ದೇಹವೆಂಬ ದೇಗುಲದಲ್ಲಿ 
ಆತ್ಮವೆಂಬ ಜ್ಯೋತಿಯು ಬೆಳಗುತಿರಲು,
ಸತ್ಸಂಗ ಸದ್ವಿಚಾರಗಳ ವಾಚಿಸುತಲಿ 
ಪೂಜೆಯು ನಿತ್ಯವೂ ಮನಸೊಳಗೆ...

ಕರ್ಮಗಳ ಬಂಧನವ ಬಿಡಿಸಬಯಸೆ 
ಮನದ ಮಂದಿರವು ಶುಚಿಯಾಗಿರಲಿ,
ನೂರು ನೋವುಗಳ ದಾಟೇ ಬದುಕು 
ನಡೆಯುತಿರಲಿ ಪೂಜೆ ದೇಹವೆಂಬ ದೇಗುಲದಿ....

19 July, 2024

ಹುಡುಕಾಟ...

ಕಳೆದು ಹೋದವರ ಹುಡುಕಬಹುದು
ಸಿಕ್ಕಿದರು ಸಿಗಬಹುದು ಜಗದ ಜಾತ್ರೆಯಲಿ,
ಬಿಟ್ಟು ಹೋದವರ ಹುಡುಕಬಹುದೇ,
ಕಾಣಬಹುದೇ ಅವರ ಚುಕ್ಕಿ ತಾರೆಗಳ ನಡುವೆ...

ಲೋಕದಾ ಜಂಜಡದೊಳು ಕಳೆದುಹೋದವರ
ಕಳೆದು ಹೋಗಿ ತಮ್ಮನ್ನೇ ಮರೆತುಹೋದವರ,
ಹುಡುಕಾಡ ಹೊರಟರೆ ಸಿಗಬಹುದೇ 
ಜಗವ ಬಿಟ್ಟು ಹೊರನಡೆದವರು...

ಹೇಳದೇ ಕೇಳದೇ ಹೊರಟುಹೋದವರ 
ಮರಳಿ ಕರೆಯಲಾಗದೆ ಜಗದೊಳಗೆ,
ಕಾರಣವಿಲ್ಲದೇ ಹೊರಟವರ 
ತಡೆಯಲಾದೀತೆ ಮನಸೊಳಗೆ...

ಸಂಬಂಧಗಳ ಬಿಟ್ಟು ನಡೆದವರ 
ಮನಸು ಮರೆತರೂ ಮರೆಯಬಹುದು,
ಕಾಲದ ಕರೆಗೆ ಓಗೊಟ್ಟು ನಡೆದವರ
ಸದಾ ಹುಡುಕುವುದು ನೀಲ ಆಕಾಶದೊಳಗೆ...

30 June, 2024

ಕಾದಂಬಿನಿ...

ನೂರು ಕವಿತೆಗಳ ನಡುವೆ 
ನಾ ಪದವಾಗಿ ಬೆರೆತೆ,
ನೂರು ನೆನಪುಗಳ ಒಳಗೆ 
ಮನಸೇ ನೀನೀಗ ನನ್ನ ಮರೆತೆ...

ನೂರು ಭಾವಗಳ ಜೊತೆಗೆ 
ಮಗುವಾಗಿ ಮನಸು ನಲಿಯೇ,
ಕನಸುಗಳ ಕನ್ನಡಿಯ ಒಡೆದು 
ಬದುಕೇ ನೀ ನಗುತಾ ನಿಂತೆ...

ಪದಪುಂಜಗಳ ತೊಟ್ಟಿಲೊಳಗೆ 
ಭಾವಗಳೇ ಮಗುವಾಗಿರಲು,
ಮನಸು ಕಟ್ಟಿದ ಗೂಡೊಳಗೇ 
ಒಲವಿನ ಚಿಲಿಪಿಲಿಯೇ ಸದಾ...

ಕವಿತೆಗಳ ಹಿಂಡಿಂದ ಹೊರಬಂದು 
ಕಥೆಯಾಗುವ ಆಸೆ ಬದುಕಿಗೆ,
ಮನಸಿಂದು ಗುನುಗುತಿದೆ ಇಲ್ಲಿ 
ಮಹಾಕಾವ್ಯವಾಗುವ ತವಕದಲಿ...

15 June, 2024

ಬದುಕಿನ ಸಂತೆಯಲಿ...

ನಗುವಿಲ್ಲದ ಕನಸಿದೆ ಬದುಕಲಿ
ಅಳುವಿಲ್ಲದ ನೆನಪೂ ಇಲ್ಲಿದೆ,
ನೋವಿರದ ಭಾವ ಇಲ್ಲಿದೆ
ನವಿರಾಗಿ ಮನಸ ತುಂಬಿದೇ...

ಭರವಸೆಯ ಮೋಡ ಇಲ್ಲಿದೆ 
ಬದುಕಲಿ ಮಳೆ ಸುರಿಸೇ ಕಾದಿದೆ,
ಮನಸಿನ ಭಾರವಾ ಕಳೆಯಲು
ನೆನಪುಗಳ ಗಾಳಿ ಬೀಸಿದೆ...

ನೂರು ನೋವುಗಳು ಮನಸನು 
ಕಾರಣ ಹೇಳದೆ ಕಾಡಿವೆ,
ಖುಷಿಯ ಬೆಳ್ಳಿಯ ರೇಖೆಯೊಂದು 
ಕಾರಣ ಕೇಳದೆ ಜೊತೆಯಾಗಿದೆ...

ಚಿಂತೆಯೆಂಬ ಹಕ್ಕಿ ಗೂಡೊಂದನು ಕಟ್ಟಿ 
ಹಾಡಿದೆ ಮತ್ತೆ ಕಾಡಿದೆ ಮನಸಿನ ಮೂಲೆಯಲಿ,
ಜೀವ ತಿನ್ನೋ ಭಾವಗಳು ಮೌನವಾಗಿವೆ
ಬದುಕಿನ ಸಂತೆಯ ತುಂಬಾ ಗದ್ದಲವೇ...

27 May, 2024

ಸಂಘರ್ಷ...

ಕಾಡುವಾ ಬದುಕ ಬನದಿ ನೂರು ಸುಳ್ಳಿದೆ
ಕಳೆದುಕೊಳ್ಳುವಾ ಭಯವು ಮಾತ್ರ ಸತ್ಯವಾಗಿದೆ,
ಬದುಕು ಇಲ್ಲಿ ಸತ್ಯ ಸುಳ್ಳಿನ ತಂತಿ ಮೇಲಿದೆ
ಆ ತಂತಿಯಾ ಮೀಟಲೂ ಜೀವ ಹೆದರಿದೆ...

ಧರ್ಮದ ಮಡಿಲಿನಲ್ಲಿ ಸತ್ಯ ಮಲಗಿರೆ
ಅಧರ್ಮದ ಹೆಗಲ ಮೇಲೆ ಸುಳ್ಳು ಮೆರೆದಿದೆ,
ಲೋಕವೂ ಸತ್ಯಕೆ ಪರೀಕ್ಷೆಯೊಡ್ಡಲೂ
ಸುಳ್ಳು ತಾನು ನಗುತಾ ಯಾತ್ರೆ ಮಾಡಿದೆ...

ಬದುಕಿನೊಳಗೆ ಸತ್ಯದಾ ಜಾತ್ರೆ ನಡೆಯದು
ಸತ್ಯದಾ ಭಾರವನ್ನು ಹೊರದು ಲೋಕವೆಂದಿಗೂ,
ಸುಳ್ಳಿಗೆ ಎಂದೂ ಇಲ್ಲಿ ಪೂಜೆ ಸಿಗುವುದೂ
ಜಗವೂ ಎಂದೂ ಬಣ್ಣದ ಮುಖವಾಡ ನಂಬೋದು...

ನೂರು ಬಾರಿ ಸೋತರೂ ಜಗದ ಜಗಲಿಯಲಿ
ಸತ್ಯವೆಂದಿಗೂ ತಲೆ ಎತ್ತಿ ನಿಲುವುದೂ,
ನೂರು ಬಾರಿ ಗೆದ್ದರೂ ಸುಳ್ಳು ಜಗದಲಿ
ತಲೆ ಬಾಗಿಸಿ ನಡೆಯಬೇಕು ಕಾಲದೊಂದಿಗೆ...

23 May, 2024

ದೀಪವೂ ನಿನ್ನದೇ...

ಬದುಕಿಲ್ಲಿ ಒಲವಿನಾ ದೀಪದಂತೆ
ಬೆಳಗಬೇಕಿಲ್ಲಿ ಊರ ಸಂತೆ,
ಕತ್ತಲೆಯ ಕಳೆಯಬೇಕು ಇಲ್ಲಿ
ಮನಸಿನ ಅಂಗಳವ ಬೆಳಗಬೇಕು...

ಮೂರು ದಿನದ ದೀಪವಂತೆ
ವಿಧಿಯೆಂಬ ಗಾಳಿಯ ಜೊತೆಗೆ,
ಕರ್ಮವೇ ಎಣ್ಣೆಯೆಲ್ಲಿ
ಸುಡದಾ ಬೆಂಕಿಯಾ ಮಾಯೆಯಲ್ಲಿ...

ದೀಪದಾ ಕೆಳಗಿಲ್ಲಿ ನೆರಳಂತೆ
ಕಾಲದ ಕಾರ್ಮೋಡ ಕವಿದಂತೆ,
ಕಷ್ಟ ಸುಖಗಳ ಪಾಡು ಮೋಡದಂತೆ
ಭರವಸೆಯೇ ಬೆಳಕಿನಾ ರಕ್ಷೆಯಂತೆ...

ಸಂವತ್ಸರಗಳ ಕಾಲ ಬೆಳಗಬೇಕು
ಬದುಕಿನಾ ದೀಪವೂ ಆರದಂತೆ,
ಕೋಟಿ ಕನಸುಗಳ ಹಾದಿಯಲ್ಲಿ
ಚಿತ್ತಾರ ಬರೆಯಲಿ ಮನಸು ಇಲ್ಲಿ...

18 May, 2024

ಪಯಣಿಗ....

ನೆನಪುಗಳ ಮರೆಯಲಿ 
ಕನಸೊಂದು ಅರಳಲಿ,
ಒಲವೆಂಬ ಚೆಲುವೆ
ಬದುಕನ್ನು ತುಂಬಲಿ...

ಕಾಲದ ಮರೆಯಲಿ
ಬದುಕಿಲ್ಲಿ ಮೆರೆಯಲಿ,
ನೋವು ನಲಿವಿನ ಜೋಕಾಲಿಯಲಿ
ಮನಸು ಸದಾ ಜೀಕುತಲಿ...

ಕಾರ್ಮೋಡ ಕವಿಯಲಿ
ನೂರು ಆಸೆಗಳ ಹೊತ್ತು,
ಮಳೆಯಾಗಿ ಸುರಿಯಲಿ
ಬತ್ತಿದೆದೆಯಾ ತುಂಬಲು...

ಮೌನವಿಲ್ಲಿ ಮಾತಾಗಲಿ
ಎದೆಯ ತುಂಬುತಾ ಭಾವವೂ,
ನಗುವು ಅಕ್ಷಯವಾಗಲಿ
ಮೂರುದಿನದ ಪಯಣದಲಿ...

21 April, 2024

ವಸಂತ...

ನಗುವಿನ ಮೊಗ್ಗಾಗಿ ಅರಳಬೇಕು
ಲೋಕದಾ ನಿಂದೆಯೊಳು ಮಿಂದೇಳಬೇಕು,
ಕರ್ಮದಾ ಬಲೆಯೊಳಗೆ ಒದ್ದಾಡಬೇಕು
ಬದುಕೇ ನೀನಿಲ್ಲಿ ಮುಗ್ಧ ಮಗುವಾಗಬೇಕು...

ಒಲವೇ ನೀನಿಲ್ಲಿ ಕಂಪ ಸೂಸಬೇಕು
ಸರಸಕ್ಕೂ ವಿರಸಕ್ಕೂ ಸಮರಸವಾಗಿ,
ನಗುವಾ ಮನಸಿನ ಗೆಲುವಾಗಿ
ಬದುಕೇ ನೀನಿಲ್ಲಿ ಬಂಧುವಾಗಬೇಕು...

ನೆನಪುಗಳ ಗಂಟನ್ನು ತೆರೆಯಬೇಕು
ಸವೆದ ಹಾದಿಯ ಒಮ್ಮೆ ನೋಡಬೇಕು,
ಕನಸುಗಳ ಹೆಜ್ಜೆ ಗುರುತನ್ನು ಹುಡುಕಬೇಕು
ಬದುಕೇ ಒಂದೊಮ್ಮೆ ನೀನು ಮೌನಿಯಾಗಬೇಕು...

ಮನಸೇ ನೀನಿಲ್ಲಿ ಅಕ್ಷಯವಾಗಬೇಕು
ಮುರಿದ ರೆಕ್ಕೆಗಳ ಕಟ್ಟಿ ನಿಲ್ಲಬೇಕು,
ಹರಿದ ಕನಸುಗಳ ಮತ್ತೆ ಜೋಡಿಸಬೇಕು
ಬದುಕೇ ನೀನಿಲ್ಲಿ ನಿತ್ಯ ನೂತನವಾಗಬೇಕು...

30 March, 2024

ಕಥೆ...

ನೂರಾರು ಕಥೆಗಳ ನಡುವೆ
ಕವಿತೆಯಾಗಿ ಉಳಿಯುವೆ ನಾ,
ನೀನೇಷ್ಟು ಓದಿದರೂ
ಯಾರೆಷ್ಟು ಕಿವಿ ಊದಿದರೂ...

ಕಥೆಗಳ ಹಂಗಿಲ್ಲ ನನಗೆ
ಆತ್ಮಸಾಕ್ಷಿಯ ನೆರಳಿರಲು,
ಕವಿತೆಯೊಳಗೆ ನಾನು ಬಂಧಿ
ಭಾವ ತಳೆದು ಪ್ರೇಮಿಯಾಗಿ...

ಕಥೆಯೊಳಗೆ ನನ್ನ ಬಂಧಿಸಲಾರೆ 
ಕೇಳು ಓ ಮೂಢ ಮನವೇ,
ಬಣ್ಣವಿಲ್ಲ ಮುಖವಾಡವಿಲ್ಲ
ಪ್ರೀತಿಯೊಂದೇ ಕನವರಿಕೆ ಇಲ್ಲಿ...

ಮೌನಿ ನಾನು ಮಾತಾಗಲಾರೆ
ಹಠದ ಮುಂದೆ ಬಾಗಲಾರೆ,
ನೀನೆಷ್ಟು ಕಥೆಗಳ ಬರೆದಿಟ್ಟರೂ
ಅವ ಬರೆದ ಕಥೆಯೇ ನಿತ್ಯ ಸತ್ಯವೂ...

17 March, 2024

ಅಂತರ್ಮುಖಿ...

ಭರವಸೆಯ ನಾಳೆಗಳಿಗೆ
ಮನಸೀಗ ಅಣಿಯಾಗಬೇಕಿಲ್ಲಿ,
ಮರೆತು ಹೋದ ಮನಸುಗಳ
ಮರೆತು ಮುಂದೆ ಸಾಗಬೇಕಿಲ್ಲಿ...

ಯಾರೋ ಬಿಟ್ಟ ನೆನಪುಗಳು
ಬದುಕಲಾರವು ಬಹಳ ದಿನ,
ಮರೆಯೋದು ವರವಿಲ್ಲಿ 
ಮೂರು ದಿನದ ಬದುಕಿನೊಳು...

ನಗುವಿರದ ಮುಖವಿಲ್ಲ
ನೋವಿರದ ಬಾಳಿಲ್ಲಾ,
ಸವೆದು ಹೋದ ದಾರಿಯಲೇ 
ನಡೆಯೋದು ಬದುಕಿಲ್ಲಿ...

ನೆರಳೇ ಇಲ್ಲಿ ಕರಗುವುದು
ಕತ್ತಲೆಯ ಛಾಯೆಯಲಿ,
ಸಂಬಂಧಗಳು ಮರೆಯಾಗುವವು
ಕಾಲಚಕ್ರದ ಸುಳಿಯೊಳಗೆ...

10 March, 2024

ಖಾಲಿ ಹಾಳೆಯಾ ತುಂಬಾ...

ಖಾಲಿ ಖಾಲಿ ಮನಸೆಲ್ಲಾ
ಖಾಲಿ ಖಾಲಿ ಕನಸೆಲ್ಲಾ,
ಬದುಕು ಸಾಗುವ ದಾರಿಯಲಿ
ಬರೀ ಮಂಜು ಮಂಜು ಬಯಲಿಲ್ಲಿ...

ಸೋತು ಹೋದ ಮನಸಿಲ್ಲಿ
ಕನಸೇ ಕಾಣದ ಬದುಕಿಲ್ಲಿ,
ನೂರು ನೋವ ತುಂಬುತಲಿ
ನೆನಪೇ ಮಾಯ ಮನದಲ್ಲಿ...

ಹರಸೋ ಮನಸು ಮೌನದಲಿ
ಶಪಿಸೋ ಕಾಲ ಬದುಕಿನಲಿ,
ವರವೂ ಇಲ್ಲ ಬದುಕಿನಲಿ
ಮಾಯೆಯ ಛಾಯೆ ಮನಸಿನಲಿ...

ಪ್ರೀತಿ ಮರೆತ ಮನಸಿನೊಳು
ಭಾವಗಳೆಲ್ಲಾ ಸೊರಗುತಿವೆ,
ತೃಪ್ತಿಯ ಹುಡುಕುವ ಬದುಕಿನೊಳು
ಅತೃಪ್ತಿಯೇ ತುಂಬಿದ ಮನಸು ಇದೆ...

19 February, 2024

ಮನಸೇ...

ಮುಗಿಲಂತ ಒಲವು ರತ್ನದಂತ ಚೆಲುವು
ಮನಸೇ ನಿನ್ನದೂ,
ಅರಿವಿನ ಮರೆಯೊಳು ಮನೆಯ ಮಾಡಿ
ಕಾಡುವ ಗುಣವೂ ನಿನ್ನದೂ...

ಕಣ್ಮುಚ್ಚಿ ಒಮ್ಮೆ ಪ್ರೀತಿಯನು ಮಾಡಿ
ಕಾಡುವ ಹಟವೂ ನಿನ್ನದೂ,
ತುಂಟ ನಗೆಯೊಳಗೆ ಬರಸೆಳೆದು
ಸ್ನೇಹದ ಅಲೆಯೊಳಗೆ ಬಂಧಿಸುವ ಮಾಯೆಯೋ...

ನೂರು ದಾರಿಯನು ಸವೆಸಿ
ಹತ್ತಾರು ಕನಸುಗಳ ವ್ಯಯಿಸೋ ಭಾವವೇ,
ಬದುಕ ಬಾನಿನ ತುಂಬಾ ಮದರಂಗಿಯ ಬರೆದು
ಮಧುವನರಸೋ ದುಂಬಿಯೇ...

ಮುಚ್ಚಿಟ್ಟ ನೆನಪುಗಳ ಬಚ್ಚಿಟ್ಟ ಕನಸುಗಳ
ಬದಲಾಯಿಸೋ ಮಾಯಾವಿಯೇ,
ಬದುಕ ಖುಷಿಯಿಂದ ಗುಣಿಸಿ
ನೋವುಗಳ ಕಳೆಯೋ ಕಿನ್ನರನೇ...

31 January, 2024

ಬೆರಗು...

ಮೂಡುವ ಚಂದಿರ
ಕನಸಿಗೆ ಸ್ಪೂರ್ತಿ,
ಮಿನುಗುವಾ ತಾರೆಗಳು
ಆಸೆಗೆ ಸ್ಪೂರ್ತಿಯೂ...

ಓಡೋ ಕಾಲವೂ
ಬದುಕಿಗೆ ಬೆರಗದೂ,
ಜಗದ ಅಂಗಳದಿ
ಬದುಕೇ ಬೆರಗಿದು...

ಆಸೆಯ ಹೂರಣ
ಕನಸಿಗೆ ಕಾರಣ,
ನೆನಪುಗಳ ಕಾರಣ
ಬಾಳಿಗೆ ತೋರಣ...

ಬದುಕಿಲ್ಲಿ ಮೆರವಣಿಗೆ
ಹೂರಣ ತೋರಣಗಳ ಜೊತೆಗೆ,
ನೆನಪುಗಳ ಜೊತೆಯಲಿ
ಬದುಕೆಂಬುದು ಬೆರಗು...

17 January, 2024

ದೇವರೆಂದರೆ...

ರಾಮನೆಂದರೆ ಯಾರು
ನಮ್ಮೊಳಗಿನ ಅಂತರಾತ್ಮ,
ಕೃಷ್ಣನೆಂದರೆ ಯಾರು
ನಮ್ಮೊಳಗಿನ ಚೈತನ್ಯ...

ಒಬ್ಬ ದೇವನಿಗಿಹುದು
ಸಾವಿರದ ಹೆಸರಿಲ್ಲಿ,
ನೂರು ರೂಪಗಳಿಲ್ಲಿ
ಅವರವರ ಭಕುತಿಯಲಿ...

ಪ್ರೀತಿಯ ರೂಪದಲಿ
ಅವ ನಮ್ಮ ಕೃಷ್ಣನಂತೆ,
ಧರ್ಮದ ಹಾದಿಯಲಿ
ಪುರುಷೋತ್ತಮ ರಾಮನಂತೆ...

ವೈರಾಗ್ಯ ಭಾವದೊಳಗೆ
ಅವನಿಲ್ಲಿ ಶಿವನಂತೆ,
ಸೃಷ್ಠಿ ಸ್ಥಿತಿ ಲಯದೊಳಗೆ
ಕಾಲಕ್ಕೂ ಮಹಾಕಾಲನಂತೆ...

ಶೂನ್ಯ ಭಾವದೊಳಗೂ
ಸಂಧಿಸೋ ಆತ್ಮವಂತೆ,
ದೇಹವೆಂಬ ಗುಡಿಯೊಳಗಿರುವ
ಆತ್ಮಕ್ಕೆ ಪರಮಾಪ್ತನವನೂ...